ADVERTISEMENT

ಕಥೆ ಹೇಳುವ, ಕೈ ತುತ್ತು ನೀಡುವ ಜೀವ ತಂಪಾಗಿರಲಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 7:40 IST
Last Updated 1 ಅಕ್ಟೋಬರ್ 2012, 7:40 IST
ಕಥೆ ಹೇಳುವ, ಕೈ ತುತ್ತು ನೀಡುವ ಜೀವ ತಂಪಾಗಿರಲಿ
ಕಥೆ ಹೇಳುವ, ಕೈ ತುತ್ತು ನೀಡುವ ಜೀವ ತಂಪಾಗಿರಲಿ   

ಬಾಗೇಪಲ್ಲಿ: `ಮೊಮ್ಮಕ್ಕಳ ಜೊತೆ ಆಟವಾಡುತ್ತ, ನಲಿಯುತ್ತ ಜೀವನದ ಕೊನೆಯ ದಿನಗಳನ್ನು ಕಳೆಯಬೇಕೆಂದು ಕನಸು ಕಂಡಿದ್ದೆ. ಮಕ್ಕಳು, ಸೊಸೆಯಂದಿರ ಜೊತೆಗೆ ಬಾಳಬೇಕೆಂದು ಬಯಕೆ ಹೊಂದಿದ್ದೆ. ಆದರೆ ಯಾವುದೂ ಈಡೇರಲಿಲ್ಲ. ವಿಧಿಯಾಟದಂತೆ ಈಗ ವೃದ್ಧಾಶ್ರಮದಲ್ಲಿ ಬದುಕುತ್ತಿದ್ದೇನೆ~.

-ಹೀಗೆ ಮನದಾಳದ ನೋವು ಹಂಚಿಕೊಂಡವರು ವೃದ್ಧ ವೆಂಕಟರಾಮಪ್ಪ. ಆಂಧ್ರಪ್ರದೇಶದ ಪಾಪಿರೆಡ್ಡಿ ಗ್ರಾಮದ ನಿವಾಸಿಯಾದ ಅವರು ಮಕ್ಕಳು, ಸೊಸೆಯಂದಿರು ಮತ್ತ ಮೊಮ್ಮಕ್ಕಳಿಂದ ದೂರವಾಗಿ ತಾಲ್ಲೂಕಿನ ಗುಳೂರು ಬಳಿಯಿರುವ ರತು ವೃದ್ಧಾಶ್ರಮದಲ್ಲಿ ನೆಲೆಸಿದ್ದಾರೆ. ನೆಮ್ಮದಿ ನಡುವೆ ದುಃಖದ ದಿನಗಳನ್ನು ಕಳೆಯುತ್ತಿದ್ದಾರೆ.

ಅವರಂತೆಯೇ ಸುಮಾರು 34 ಮಂದಿ ವೃದ್ಧಾಶ್ರಮದಲ್ಲಿ ವಾಸವಿದ್ದಾರೆ. ಮಾನವಧರ್ಮ ಪೀಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ತಮ್ಮ ತಾಯಿ ರತು ಅವರ ಹೆಸರಿನಲ್ಲಿ ಸ್ಥಾಪಿಸಿರುವ ಈ ವೃದ್ಧಾಶ್ರಮದಲ್ಲಿ 18 ಮಹಿಳೆಯರು, 14 ಮಂದಿ ಪುರುಷರು ನೆಲೆಸಿದ್ದಾರೆ.

ತಾಲ್ಲೂಕಿನ ಮದ್ದಲಖಾನ, ಉಗ್ರಾಣಂಪಲ್ಲಿ, ನೀರಗಂಟಿಪಲ್ಲಿ, ಯಲ್ಲಂಪಲ್ಲಿ, ಐವಾರಪಲ್ಲಿ, ಗೂಳೂರು ಗ್ರಾಮಗಳ ನಿವಾಸಿಗಳಲ್ಲದೆ ಆಂಧ್ರಪ್ರದೇಶದ ಬೂದಲಿ, ಮರಸನಪಲ್ಲಿ ಗ್ರಾಮಗಳ ವೃದ್ಧರು ಇಲ್ಲಿದ್ದಾರೆ. ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಬೃಹದಾಕಾರವಾಗಿ ನಾಲ್ಕು ಕೊಠಡಿ ನಿರ್ಮಿಸಲಾಗಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಜೊತೆಗೆ ಮೂಲಸೌಕರ್ಯ ಇಲ್ಲಿ ಪೂರೈಸಲಾಗಿದೆ.

`ಈ ವೃದ್ಧಾಶ್ರಮಕ್ಕೆ ನಾನು 18 ವರ್ಷಗಳ ಹಿಂದೆ ಸೇರಿದೆ. ಮಗ-ಮಗಳ ಕಷ್ಟ ಮತ್ತು ಅಪಸ್ವರಗಳ ನಡುವೆ ಬಾಳಲು ಇಷ್ಟವಾಗಲಿಲ್ಲ. ಬೇಡವಾದ ವಸ್ತುವಾದ ನಾನು ಒಪ್ಪೊತ್ತು ಊಟಕ್ಕೂ ಪರದಾಡಬೇಕಾಯಿತು. ನನ್ನ ಸ್ವಂತ ಮನೆಯಲ್ಲಿ ನಾನೇ ಅನಾಥ. ಮೊಮ್ಮಗಳು ಹಿಂದೂಪೂರದ ವಿದ್ಯಾರ್ಥಿನಿಲಯದಲ್ಲಿ ವಾಸವಿದ್ದಾಳೆ.

ಸರ್ಕಾರದಿಂದ ವೃದ್ಧಾಪ್ಯ ವೇತನ ಸಿಗುತ್ತಿಲ್ಲ. ಹೇಗೋ ಕಷ್ಟಪಟ್ಟು ಇಲ್ಲೇ ವಾಸವಿದ್ದೇನೆ. ನನ್ನಂತೆಯೇ ಇರುವ ಸ್ನೇಹಿತರೊಂದಿಗೆ ದಿನ ಕಳೆಯುತ್ತಿದ್ದೇನೆ~ ಎಂದು ವೆಂಕಟರಾಮ ತಿಳಿಸಿದರು.

`ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಇದ್ದವು. ಮನೆಯಲ್ಲಿ ಹಿರಿಯರಿಗೆ ಗೌರವ ಇತ್ತು. ಆದರೆ ಸಣ್ಣ ಕುಟುಂಬಗಳಿಂದ ಹಿರಿಯರಿಗೆ ಮನ್ನಣೆ ಇಲ್ಲದಂತೆ ಆಗಿದೆ. ನೀತಿಕಥೆ, ಜೀವನದ ಮೌಲ್ಯದ ಬಗ್ಗೆ ಹೇಳಿದರೆ, ಈಗಿನವರಿಗೆ ಅರ್ಥವೇ ಆಗುವುದಿಲ್ಲ~ ಎಂದು ಮಂಗಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.