ಚಿಂತಾಮಣಿ: ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ನಗರದ 24ನೇ ವಾರ್ಡ್ ನಾರಸಿಂಹಪೇಟೆಯಲ್ಲಿ ಸಾರ್ವಜನಿಕರು ನಗರಸಭೆ ಅಧಿಕಾರಿಗಳಿಗೆ ಘೇರಾವ್ ಮಾಡಿ ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆದಿದೆ.
ನಾರಸಿಂಹಪೇಟೆ ಹಾಗೂ ಸುತ್ತಮುತ್ತಲು ಕುಡಿಯುವ ನೀರಿಗಾಗಿ ಮಹಿಳೆಯರು ಪರದಾಡುವಂತಾಗಿದೆ. ಪ್ರತಿನಿತ್ಯ ನೀರಿಗಾಗಿ ನೂರಾರು ರೂಪಾಯಿ ಕೊಟ್ಟು ಟ್ಯಾಂಕರ್‌ಗಳ ಮೊರೆಹೋಗಬೇಕಾಗಿದೆ.
ಬಡವರು ದೂರದ ಸ್ಥಳಗಳಿಂದ ನೀರು ತರಲು ದಿನದ ಎಲ್ಲ ಕೆಲಸಗಳನ್ನು ತ್ಯಜಿಸಿ ಶ್ರಮಿಸಬೇಕಾಗಿದೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ನಾಗಮ್ಮ ತಿಳಿಸಿದರು.
ನಾರಸಿಂಹಪೇಟೆಯಲ್ಲಿ ಸುಮಾರು 20 ದಿನಗಳಿಂದ ಸರಿಯಾಗಿ ನೀರು ಬರುತ್ತಿಲ್ಲ. ಅನೇಕ ಬಾರಿ ನಗರಸಭೆಯ ಅಧಿಕಾರಿಗಳಿಗೆ ಮೌಖಿಕವಾಗಿ ಹಾಗೂ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆ. 2-3 ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಸಮಸ್ಯೆ ಬಗೆಹರಿದಿಲ್ಲ ಎಂದು ನಗರಸಭೆ ಸದಸ್ಯ ಶ್ರೀನಾಥ್ ಆರೋಪಿಸಿದರು.
ನಗರಸಭೆಯ ಪ್ರಭಾರಿ ಪೌರಾಯುಕ್ತ ಗಂಗಣ್ಣ ಹಾಗೂ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಸಾರ್ವಜನಿಕರು ಅವರಿಗೆ ಮುತ್ತಿಗೆ ಹಾಕಿ ಬೆವರಿಳಿಸಿದರು.
ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಶೀಘ್ರವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರೂ ಪ್ರತಿಭಟನಾಕಾರರು ಪಟ್ಟು ಬಿಡದೆ ಕುಳಿತರು. ಈಗಾಗಲೇ ಹಲವಾರಿ ಬಾರಿ ಇಂಥ ಭರವಸೆ ನೀಡಿದ್ದೀರಿ. ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ದೂರಿದರು.
ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂಬ ಖಚಿತ ಆಶ್ವಾಸನೆ ದೊರೆತ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಮುಖಂಡರಾದ ಮಹದೇವಾಚಾರಿ, ಮೋಹನ್, ವೀಣಾ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.