ADVERTISEMENT

ಕುರಿಗಳಿದ್ದರೆ ಸಾಕು, ಬದುಕಿಬಿಡ್ತೀವಿ!

ನಮ್ಮೂರು ನಮ್ಮ ಹೆಮ್ಮೆ

ರಾಹುಲ ಬೆಳಗಲಿ
Published 29 ಜನವರಿ 2016, 6:17 IST
Last Updated 29 ಜನವರಿ 2016, 6:17 IST
ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಹೋಬಳಿ ಕೊತ್ತೂರು ಗ್ರಾಮದಲ್ಲಿರುವ ಕುರಿ ಮತ್ತು ಮೇಕೆಗಳು.
ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಹೋಬಳಿ ಕೊತ್ತೂರು ಗ್ರಾಮದಲ್ಲಿರುವ ಕುರಿ ಮತ್ತು ಮೇಕೆಗಳು.   

‘ದೇವರಿದ್ದಾನೋ ಇಲ್ವೋ ಗೊತ್ತಿಲ್ಲ. ಶಾಸಕರು ಅಥವಾ ಅಧಿಕಾರಿಗಳು ಸಮಸ್ಯೆ ಬಗೆಹರಿಸುವುರೋ ಇಲ್ವೊ ಖಾತ್ರಿಯಿಲ್ಲ. ಮಳೆ ಬರುವುದೋ ಅಥವಾ ಇಲ್ವೊ ಮಾಹಿತಿ ಇಲ್ಲ. ಆದರೆ ಒಂದು ಮಾತಂತೂ ಸತ್ಯ. ಮೇಯಿಸಲಿಕ್ಕೆ 40 ಕುರಿ ಮತ್ತು ಮೇಕೆಗಳಿದ್ದರೆ ಸಾಕು, ನಾವು ಬದುಕಿಬಿಡ್ತೀವಿ...’

ಬಾಗೇಪಲ್ಲಿ ತಾಲ್ಲೂಕಿನ ಕಟ್ಟಕಡೆಯ ಪಾತಪಾಳ್ಯ ಹೋಬಳಿ ಕೊತ್ತೂರು ಗ್ರಾಮದ ಕುರಿಗಾಹಿ 50 ವರ್ಷದ ಲಕ್ಷ್ಮಿನರಸಿಂಹಪ್ಪ ಹೇಳಿದ ಮಾರ್ಮಿಕ ಮಾತಿದು.

ಗ್ರಾಮದ ಕಿರಿದಾದ ಬೀದಿಯಲ್ಲಿ ಸಾಗುತ್ತಿದ್ದ ಕುರಿ ಮತ್ತು ಮೇಕೆಗಳ ಹಿಂಡನ್ನು ಹಿಡಿದಿಟ್ಟುಕೊಂಡು ಮಾತು ಮುಂದುವರೆಸಿದ ಅವರು, ‘ಇವು ಇರದಿದ್ದರೆ ನಾವು ಇಲ್ಲಿ ಬದುಕೋದು ಸಾಧ್ಯವಿತ್ತಾ? ಖಂಡಿತಾ ಇಲ್ಲ. ಇವುಗಳ ಇದ್ದಾವೆಂದೇ ನಾವು ಪುಟ್ಟ ಮನೆಗಳಲ್ಲಿ ಮರ್ಯಾದೆಯಿಂದ ಬದುಕಿದ್ದೇವೆ’ ಎಂದರು.

ಕೊತ್ತೂರಿನಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿದ್ದು, ಅವರಲ್ಲಿ ಕನಿಷ್ಠ 70 ಮನೆಯವರು ಕುರಿಗಾಹಿಗಳು. ಬೆಳಿಗ್ಗೆಯಿಂದ ಸಂಜೆಯವರೆಗೆ ಗ್ರಾಮದಲ್ಲೇ ಉಳಿದುಕೊಂಡು ಸುತ್ತಾಟ ನಡೆಸಿದರೆ, ಯಾವುದಾದರೂ ಮೂಲೆಯಿಂದ ಮೇಕೆ ಮತ್ತು ಕುರಿಗಳು ಸದ್ದು ಕೇಳಿಸದೇ ಇರುವುದಿಲ್ಲ. ಹಿಂಡು ಕಾಣದೇ ಇರುವುದಿಲ್ಲ.

ಸುತ್ತಮುತ್ತಲೂ ಗುಡ್ಡಗಾಡು ಪ್ರದೇಶ ಆವರಿಸಿಕೊಂಡಿರುವ ಈ ಗ್ರಾಮದಲ್ಲಿನ ಬಹುತೇಕ ಕುರಿ ಮತ್ತು ಮೇಕೆಗಳನ್ನು ನೆಚ್ಚಿಕೊಂಡಿದ್ದರೆ, ಇನ್ನೂ ಕೆಲವರು ಜಾನುವಾರುಗಳನ್ನು ನಂಬಿ ಹೈನುಗಾರಿಕೆ ನಡೆಸಿದ್ದಾರೆ. ಕೃಷಿ ಚಟುವಟಿಕೆ ಕೈಗೊಳ್ಳಲು ಅವರು ಬಯಸಿದರೂ ಸುತ್ತಮುತ್ತ ಫಲವತ್ತಾದ ಜಮೀನು ಸಿಗುವುದು ಕಷ್ಟ.

‘ಗ್ರಾಮದಲ್ಲಿ ವಾಸವಿರುವ ಬಹುತೇಕ ಮಂದಿ ಅನಕ್ಷರಸ್ಥರಾಗಿದ್ದು, ಮೂಲಸೌಕರ್ಯಗಳ ಕೊರತೆ ವ್ಯಾಪಕವಾಗಿದೆ. ಕನ್ನಡಕ್ಕಿಂತ ತೆಲುಗನ್ನು ಹೆಚ್ಚು ಸ್ಪಷ್ಟವಾಗಿ ಮಾತನಾಡುತ್ತಾರೆ. ಸುತ್ತಮುತ್ತ ಎಲ್ಲಿಯೂ ಕಾರ್ಖಾನೆಯಿಲ್ಲ. ಉದ್ಯೋಗಾವಕಾಶ ಕೊಡಬಲ್ಲ ಸಂಸ್ಥೆಗಳಿಲ್ಲ. ಸ್ವಯಂ–ಉದ್ಯೋಗ ಕಂಡುಕೊಳ್ಳಲು ಸಾಲಸೌಲಭ್ಯ ಸಿಗೋದು ಕಷ್ಟ. ಅದಕ್ಕೆ ಪೂರ್ವಜರ ಕಾಲದಿಂದ ಇರುವ ಕುರಿಗಾಹಿ ಬದುಕನ್ನೇ ನಡೆಸುತ್ತಿದ್ದೇವೆ’ ಎಂದು ಲಕ್ಷ್ಮಿನರಸಿಂಹಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಗಳೂರಿಗೆ ಹೋಗಿ ನೆಲೆಸಿ, ಕೂಲಿಕೆಲಸ ಮಾಡುವಷ್ಟು ಚೈತನ್ಯ ಅಥವಾ ಧೈರ್ಯ ನಮಗಿಲ್ಲ. ತಿಳಿವಳಿಕೆ ಕೂಡ ಇಲ್ಲ. ಆದರೆ ಕುರಿ ಮತ್ತು ಮೇಕೆಗಳನ್ನು ಸಾಕಿದರೆ, ಒಂದಿಷ್ಟು ಸಮಸ್ಯೆ ನೀಗುತ್ತವೆ. ವೈಭವದಿಂದ ಬದುಕಲು ಸಾಧ್ಯವಾಗದಿದ್ದರೂ ಸರಳವಾಗಿ ಜೀವನ ನಡೆಸಬಹುದು’ ಎಂದರು.

ಒಂದು ಕುರಿ ವರ್ಷಕ್ಕೆ ಎರಡು ಮರಿ ಹಾಕುತ್ತದೆ. 15 ಕೆಜಿ ತೂಗುವ ಮರಿಯನ್ನು ₹ 4 ಸಾವಿರದಿಂದ 5 ಸಾವಿರಕ್ಕೆ ಮಾರಬಹುದು. ಅಗತ್ಯವಿದ್ದಲ್ಲಿ 30 ಕೆಜಿ ತೂಗುವ ದೊಡ್ಡ ಕುರಿಯನ್ನೇ ₹ 8 ಸಾವಿರದಿಂದ 10 ಸಾವಿರಕ್ಕೆ ಮಾರಬಹುದು. ಅವುಗಳನ್ನು ಮಾರಿ, ಮತ್ತಷ್ಟು ಕುರಿ ಮರಿಗಳನ್ನು ಖರೀದಿಸಬಹುದು ಇಲ್ಲವೇ ನಾನಾ ಕೆಲಸಗಳಿಗೆ ಹಣವನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಕುರಿಗಾಲು ಚಾಪಲ ನಂಜುಂಡಪ್ಪ ತಿಳಿಸಿದರು. 

ಕುರಿ ಮತ್ತು ಮೇಕೆಗಳ ಇಕ್ಕೆ ಗೊಬ್ಬರಕ್ಕೂ ಹೆಚ್ಚು ಬೇಡಿಕೆಯಿದೆ. ಒಂದು ಟ್ರ್ಯಾಕ್ಟರ್‌ನಷ್ಟು ಗೊಬ್ಬರ ₹ 3 ಸಾವಿರದಿಂದ 5 ಸಾವಿರಕ್ಕೆ ಮಾರಬಹುದು. ಈಚೆಗೆ ಸರ್ಕಾರದವರು ಕುರಿಗಾಹಿಗಳಿಗೆ ಸಾಕಷ್ಟು ನೆರವು ನೀಡುತ್ತಿದ್ದು, ಅದರಿಂದಲೂ ಕೊಂಚ ಸಹಕಾರಿಯಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.