ADVERTISEMENT

ಕೇಂದ್ರ ಸ್ಥಾನದಲ್ಲಿರದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 9:00 IST
Last Updated 18 ಅಕ್ಟೋಬರ್ 2012, 9:00 IST

ಚಿಕ್ಕಬಳ್ಳಾಪುರ:  `ಜಿಲ್ಲಾಡಳಿತದ ವಿವಿಧ ಇಲಾಖೆಗಳ ಬಹುತೇಕ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಉಳಿಯದೇ ಸರ್ಕಾರಿ ವಾಹನಗಳಲ್ಲಿಯೇ ಬೆಂಗಳೂರಿಗೆ ಹೋಗಿ ನೆಲೆಸುತ್ತಿರುವ ವಿಷಯ ಗಮನಕ್ಕೆ ಬಂದಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು~ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎನ್.ಅಶ್ವತ್ಥಪ್ಪ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಜನರ ಸಂಪರ್ಕಕ್ಕೆ ಸಿಗದಿರುವುದು ಕಂಡು ಬಂದಿದೆ~ ಎಂದರು.
`ಕೆಲಸ ಮಾಡುತ್ತಿರುವ ಊರಿನಲ್ಲಿ ಅಥವಾ ಸಮೀಪದ ಸ್ಥಳದಲ್ಲಿ ಆಯಾ ಇಲಾಖೆಗಳ ಅಧಿಕಾರಿಗಳು ವಾಸವಿರಬೇಕು.

ಸಮಸ್ಯೆಗಳು ಎದುರಾದಲ್ಲಿ ಮತ್ತು ತುರ್ತು ಸಂದರ್ಭಗಳಲ್ಲಿ ಜನರಿಗೆ ಲಭ್ಯವಾಗುವಂತೆ ಇರಬೇಕು ಎಂಬ ಸರ್ಕಾರಿ ಆದೇಶವೂ ಇದೆ. ಆದರೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರವ ಬಹುತೇಕ ಅಧಿಕಾರಿಗಳು ಬೆಂಗಳೂರಿನಲ್ಲೇ ಮನೆಗಳಲ್ಲಿಯೇ ವಾಸವಿದ್ದಾರೆ. ಸರ್ಕಾರಿ ವಾಹನಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ. ಅಧಿಕಾರಿಗಳು ಈ ರೀತಿ ಕರ್ತವ್ಯಲೋಪವೆಸಗಿದರೆ, ಜನರ ಮತ್ತು ಜಿಲ್ಲೆಗಳ ಸಮಸ್ಯೆಗಳು ಹೇಗೆ ಬಗೆಹರಿಯುತ್ತವೆ~ ಎಂದು ಅವರು ಪ್ರಶ್ನಿಸಿದರು.

`ಮುಂದಿನ ಪ್ರಗತಿ ಪರಿಶೀಲನಾ ಸಭೆ ವೇಳೆ ಎಲ್ಲ ಇಲಾಖೆಗಳ ಅಧಿಕಾರಿಗಳ ಸಮಗ್ರ ಮಾಹಿತಿ ಇರಬೇಕು. ಅವರು ಕಚೇರಿಗಳಿಗೆ ಬರುವ ಸಮಯ, ಸಭೆ ಹಾಜರಾಗುವುದು, ಗೈರು ಬಗ್ಗೆ ಸಮಗ್ರ ಮಾಹಿತಿ ನೀಡಬೇಕು. ಕರ್ತವ್ಯಲೋಪ ಸಾಬೀತಾದಲ್ಲಿ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಲಾಗುವುದು~ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ ಮಾತನಾಡಿ, `ಜಿಲ್ಲೆಯಲ್ಲಿ ಬರಗಾಲ ಆವರಿಸಿ ಎರಡು ವರ್ಷಗಳು ಕಳೆಯುತ್ತಿದ್ದರೂ ಕೃಷಿ ಇಲಾಖೆವತಿಯಿಂದ ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಕೆಲಸಕಾರ್ಯಗಳು ನಡೆದಿಲ್ಲ. ಜಾನುವಾರುಗಳಿಗೆ ಸರಿಯಾಗಿ ಮೇವು ವಿತರಣೆಯಾಗುತ್ತಿಲ್ಲ.

ತೋರಿಕೆಗೆ ಎಂಬಂತೆ ಗೋಶಾಲೆಗಳನ್ನು ತೆರೆಯಲಾಗಿದೆ ಹೊರತು ಅಲ್ಲಿ ಜಾನುವಾರುಗಳಿಗೆ ಯಾವುದೇ ರೀತಿಯ ಸೌಲಭ್ಯಗಳು ದೊರೆಯುತ್ತಿಲ್ಲ. ಪರಿಸ್ಥಿತಿ ಹೀಗಿದ್ದರೆ, ರೈತರಲ್ಲಿನ ಆತಂಕ ನಿವಾರಣೆ ಹೇಗೆ~ ಎಂದು ಪ್ರಶ್ನಿಸಿದರು.

`ಜಿಲ್ಲೆಯಲ್ಲಿ ಮಳೆಯಾಗದ ಕಾರಣ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆ ಉಂಟಾಗಿದೆ. ರೇಷ್ಮೆ ಹುಳುಗಳ ಸಾಕಾಣಿಕೆಯು ಮಂದಗತಿಯಲ್ಲಿ ಸಾಗಿದೆ. ಸರ್ಕಾರವು ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ~ ಎಂದು ಕೃಷಿ ಇಲಾಖೆ ಅಧಿಕಾರಿ ತಿಳಿಸಿದರು.

ಹಿರಿಯ ನಾಗರಿಕರ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯಲ್ಲಿನ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.