ADVERTISEMENT

ಗುಂಪು ಘರ್ಷಣೆ: ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 10:00 IST
Last Updated 13 ಜನವರಿ 2012, 10:00 IST

ಚಿಂತಾಮಣಿ: ಹಳೆ ವೈಷಮ್ಯದ ಹಿನ್ನಲೆಯಲ್ಲಿ ಒಂದೇ ಜನಾಂಗದ ಎರಡು ಗುಂಪುಗಳ ನಡುವೆ ನಡೆಯಲಿದ್ದ ಘರ್ಷಣೆ ತಪ್ಪಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ ಘಟನೆ ಗುರುವಾರ ನಗರದಲ್ಲಿ ನಡೆದಿದೆ.

ಈ ಸಂಬಂಧ ಎರಡು ಗುಂಪುಗಳ  9 ಜನರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಅಗ್ರಹಾರ ಮತ್ತು ಗಾಂಧಿನಗರದ ಎರಡು ಗುಂಪುಗಳ ನಡುವೆ ಹಳೆ ವೈಷಮ್ಯವಿತ್ತು. 2006ರಲ್ಲಿ ಗಾಂಧಿನಗರದ ತಾಜ್‌ಖಾನ್ ಎಂಬಾತನನ್ನು ಅಗ್ರಹಾರದ ಸುನ್ನಾ ಗುಂಪು ಕೊಲೆ ಮಾಡಿತ್ತು. ಅಂದಿನಿಂದಲೂ ಘರ್ಷಣೆಗಳು ನಡೆಯುತ್ತಿದ್ದವು. ಸುನ್ನಾ ತಮ್ಮ ಇರ್ಷಾದ್ ಮೇಲೆ ಮೊಕದ್ದಮೆ ದಾಖಲಾಗಿದ್ದು ಜೈಲಿನಲ್ಲಿದ್ದನು.

ಬುಧವಾರ ರಾತ್ರಿ ಗಾಂಧಿನಗರದ ವಾಸೀಂಖಾನ್ ಬೆಂಗಳೂರಿನಿಂದ ನಗರಕ್ಕೆ ಬಂದಿದ್ದಾನೆ. ಸುನ್ನಾ ಗುಂಪು ಅವನ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಎರಡು ಗುಂಪುಗಳಿಗೂ ಮಾತಿನ ಚಕಮುಖಿ ನಡೆದು ಹೊಡೆದಾಡುವ ಹಂತಕ್ಕೆ ತಲುಪಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಮಾತುಕತೆ ನಡೆಸಿದಾಗ ತಾವೇ ಪಂಚಾಯಿತಿ ಮಾಡಿ ರಾಜಿ ಮಾಡಿಕೊಳ್ಳುವುದಾಗಿ ತಿಳಿಸಿದರು ಎಂದು ನಗರ ಠಾಣೆಯ ಇನ್ಸ್‌ಪೆಕ್ಟರ್ ಸರ್ಧಾರ್ ತಿಳಿಸಿದರು.
ಗುರುವಾರ ಎರಡು ಗುಂಪುಗಳು ಮಾತುಕತೆ ನಡೆಸಿದಾಗ ಮಾತಿಗೆ ಮಾತು ಬೆಳೆದು ಘರ್ಷಣೆಗೆ ನಿಂತಿದ್ದರು.
ಚಾಕು, ಚೂರಿ, ಲಾಂಗ್‌ಗಳಿಂದ ಹೊಡೆದಾಟಕ್ಕೆ ಸಿದ್ದರಾಗಿದ್ದರಿಂದ ಪೊಲೀಸರು ಮಧ್ಯಪ್ರವೇಶಿಸಿ ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ.

ನಂತರ ಎರಡು ಗುಂಪುಗಳು ಪೊಲೀಸ್ ಠಾಣೆ ಬಳಿ ಬಂದು ಮುಖಂಡರು ಒಳಗಡೆ ಮಾತುಕತೆ ನಡೆಸುತ್ತಿದ್ದಾಗ ಹೊರಗಡೆ ಎರಡು ಗುಂಪುಗಳ ಬೆಂಬಲಿಗರು ಮಾರಾ ಮಾರಿಗೆ ಸಿದ್ದರಾಗಿದ್ದಾರೆ. ಪೊಲೀಸರು ಮತ್ತೆ ಬೆತ್ತದ ರುಚಿ ತೋರಿಸಿದ್ದಾರೆ. ಒಟ್ಟಾರೆ ಎರಡು ಗುಂಪುಗಳ ಘರ್ಷಣೆಯಿಂದಾಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಪೊಲೀಸರು ಎರಡು ಗುಂಪುಗಳ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡು ಅಗ್ರಹಾರದ ಸುನ್ನಾ, ಅಮೂಲ್, ದಾದು, ಇಮ್ರೋನ್‌ಖಾನ್, ನಿಜಾಂಖಾನ್ ಹಾಗೂ ಗಾಂಧಿ ನಗರದ ವಾಸಿಂ ಖಾನ್, ಫೈರೋಜ್ ಖಾನ್, ಮಹಬೂಬ್‌ಜಾನ್ ಶೌಕತ್ ಖಾನ್ ಸೇರಿ ಒಟ್ಟು 9 ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.