ADVERTISEMENT

ಗೊಬ್ಬರದ ಮೂಟೆಯಲ್ಲಿ ಮರಳು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2013, 6:41 IST
Last Updated 6 ಆಗಸ್ಟ್ 2013, 6:41 IST

ಚಿಕ್ಕಬಳ್ಳಾಪುರ: ನಗರದ ಶಿಡ್ಲಘಟ್ಟ ವೃತ್ತ ಸಮೀಪದ ಖಾಸಗಿ ರಸಗೊಬ್ಬರ ಮಾರಾಟ ಮಳಿಗೆಯೊಂದರಲ್ಲಿ ಮರಳು ಮಿಶ್ರಿತ ಕಾರ್ಬನ್ ಸಾವಯವ ಗೊಬ್ಬರ ಮೂಟೆಗಳನ್ನು ಮಾರಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಕಾರ್ಬನ್ ಸಾವಯವ ಗೊಬ್ಬರದ ಮೂಟೆಗಳನ್ನು ಖರೀದಿಸಿದ ಬಹುತೇಕ ರೈತರಿಗೆ ಭಾರಿ ವಂಚನೆಯಾಗಿದ್ದು, ಗೊಬ್ಬರಕ್ಕಿಂತ ಮರಳಿನ ಪ್ರಮಾಣವೇ ಹೆಚ್ಚಾಗಿದೆ. ಸಾವಯವ ಮೂಟೆಗಳನ್ನು ಖರೀದಿಸಿರುವ ರೈತರು ಮೋಸ ಹೋಗಿದ್ದು, ಅವರಿಗೆ ಸಮರ್ಪಕವಾದ ಪರಿಹಾರವನ್ನೂ ನೀಡುತ್ತಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ಸಾವಯವ ಗೊಬ್ಬರ ಮೂಟೆಯಲ್ಲಿ ಮರಳನ್ನು ಮಿಶ್ರಣ ಮಾಡಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ. ಗೊಬ್ಬರಕ್ಕಿಂತ ಮರಳಿನ ಪ್ರಮಾಣವೇ ಹೆಚ್ಚಿರುವ ಕಾರಣ ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಮೂಟೆಯನ್ನು ಸರಿಯಾಗಿ ಪರಿಶೀಲನೆ ನಡೆಸಿದಾಗ, ಸತ್ಯಾಂಶ ಬೆಳಕಿಗೆ ಬಂದಿತು ಎಂದರು.

ಕೆಲ ದಿನಗಳ ಹಿಂದೆ ಮೂಟೆಗಳನ್ನು ಖರೀದಿಸಿದ್ದ ತಿಪ್ಪೇನಹಳ್ಳಿಯ ರೈತರೊಬ್ಬರು ಮಾರಾಟ ಮಳಿಗೆ ಮಾಲೀಕರನ್ನು ಪ್ರಶ್ನಿಸಿದಾಗ, ಯಾವುದೇ ಮಾಹಿತಿ ನೀಡದೇ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ. ಇತಮಾಕಲಹಳ್ಳಿ, ಅಜ್ಜವಾರ ಮುಂತಾದ ಗ್ರಾಮಗಳ ರೈತರು ಮೂಟೆಗಳನ್ನು ಖರೀದಿಸಿದಾಗಲೂ ಮರಳಿನ ಪ್ರಮಾಣವೇ ಹೆಚ್ಚು ಕಂಡು ಬಂತು ಎಂದು ಅವರು ತಿಳಿಸಿದರು.

ಸ್ಥಳಕ್ಕೆ ಬಂದ ಕೃಷಿ ಇಲಾಖೆ ಅಧಿಕಾರಿ ವಿಜಯ್ ಅವರು ಮೂಟೆಗಳನ್ನು ಪರಿಶೀಲಿಸಿ, 140 ಮೂಟೆಗಳನ್ನು ವಶಪಡಿಸಿಕೊಂಡರು. ಮೂಟೆಗಳನ್ನು ಪರೀಕ್ಷಿಸಲು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು. ರೈತ ಮುಖಂಡರಾದ ಮಂಜುನಾಥ್, ವೆಂಕಟರವಣಪ್ಪ, ಗಂಗಾಧರ್, ಕೇಶವ, ಟಿ.ಮುನಿಕೆಂಪಣ್ಣ, ರಾಮಕೃಷ್ಣ, ಮೂರ್ತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT