ADVERTISEMENT

ಗ್ರಾಮಸ್ಥರು ಪತ್ತೆ ಮಾಡಿದ ಸಂಸ್ಕೃತ ಶಾಸನ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 7:04 IST
Last Updated 6 ಏಪ್ರಿಲ್ 2018, 7:04 IST
ಇರಗಪ್ಪನಹಳ್ಳಿಯಲ್ಲಿ ಕೊಳದ ಬಳಿ ಗ್ರಾಮಸ್ಥರು ಪುರಾತನ ಸಂಸ್ಕೃತ ಭಾಷೆಯ ಶಾಸನವನ್ನು ಪತ್ತೆ ಹಚ್ಚಿದರು
ಇರಗಪ್ಪನಹಳ್ಳಿಯಲ್ಲಿ ಕೊಳದ ಬಳಿ ಗ್ರಾಮಸ್ಥರು ಪುರಾತನ ಸಂಸ್ಕೃತ ಭಾಷೆಯ ಶಾಸನವನ್ನು ಪತ್ತೆ ಹಚ್ಚಿದರು   

ಶಿಡ್ಲಘಟ್ಟ: ತಾಲ್ಲೂಕಿನ ಇರಗಪ್ಪನಹಳ್ಳಿಯಲ್ಲಿ ಗುರುವಾರ ವಿಶಿಷ್ಟ ಕೆತ್ತನೆಯ ಸೋಪಾನದ ಸಾಲಿನಿಂದ ಕೂಡಿದ ನೀರಿನ ಕೊಳದ ಬಳಿ ಗ್ರಾಮಸ್ಥರು ಪುರಾತನ ಸಂಸ್ಕೃತ ಭಾಷೆಯ ಶಾಸನವನ್ನು ಪತ್ತೆ ಹಚ್ಚಿದ್ದಾರೆ. ಗ್ರಾಮದ ಪಟೇಲ್‌ ಬೈರಾರೆಡ್ಡಿ ನೇತೃತ್ವದಲ್ಲಿ ಫಣಿಕುಮಾರ್‌, ಗೆರಿಗಪ್ಪ, ರಾಜಪ್ಪ, ಮುನಿರಾಜು, ಎಸ್‌.ವೆಂಕಟೇಶ್‌ ಮತ್ತಿತರರು ಬಸವನ ಮಂಟಪದ ಸ್ವಲ್ಪ ದೂರದಲ್ಲಿ ವಿಶಾಲವಾದ ಹೊಲದಲ್ಲಿ ಇರುವ ಕೊಳದ ಬಳಿ ಮಣ್ಣಿನಲ್ಲಿ ಹೂತುಹೋಗಿದ್ದ ಶಾಸನವನ್ನು ಹುಡುಕಿ ತೆಗೆದು, ಕಲ್ಲನ್ನು ತೊಳೆದಿಟ್ಟಿದ್ದಾರೆ.

‘ಈಚೆಗೆ ಗ್ರಾಮಕ್ಕೆ ಶಾಸನತಜ್ಞ ಪ್ರೊ.ಕೆ.ಆರ್‌. ನರಸಿಂಹನ್‌ ಬಂದಿದ್ದರು. ಅವರು ನಂದಿ ಮಂಟಪದ ಬಳಿಯಿರುವ ಸಂಸ್ಕೃತ ಭಾಷೆ ಶಾಸನವನ್ನು ಕಂಡು ಕ್ರಿ.ಶ. 1359ನೇ ಇಸವಿಯದ್ದು ಎಂದು ತಿಳಿಸಿ ಅದನ್ನು ಸಂರಕ್ಷಿಸಲು ಹೇಳಿದ್ದರು. ಆ ಸಂದರ್ಭದಲ್ಲಿ ಕೊಳದ ಬಳಿ ಇನ್ನೊಂದು ಶಾಸನ ಇರಬೇಕು. ಬಿ.ಎಲ್‌.ರೈಸ್‌ ಅವರ ಎಪಿಗ್ರಾಫಿಕಾ ಕರ್ನಾಟಕಾದಲ್ಲಿ ಅದರ ಬಗ್ಗೆ ಮಾಹಿತಿ ಇದೆ. ಅದೂ ಕೂಡ ಸಂಸ್ಕೃತದ ಶಾಸನ. ಕ್ರಿ.ಶ. 1360 ರ ಆ ಶಾಸನವನ್ನು ಹುಡುಕಿ ಎಂದು ಹೇಳಿದರು’ ಎಂದರು.

‘ಬಹಳ ವರ್ಷಗಳ ಹಿಂದೆ ಅದನ್ನು ನಾವೂ ನೋಡಿದ್ದೆವು. ಆದರೆ ಜಮೀನುಗಳ ಬದುವಿನ ಮಣ್ಣು ಬಿದ್ದು ಅದು ಮುಚ್ಚಿ ಹೋಗಿತ್ತು. ಈ ದಿನ ಗ್ರಾಮಸ್ಥರ ಸಹಕಾರದಿಂದ ಹಾಗೂ ಶ್ರಮದಾನದಿಂದ ಅಪರೂಪದ ಇತಿಹಾಸದ ಕಲ್ಲನ್ನು ಹುಡುಕಿಟ್ಟೆವು’ ಎಂದು ಪಟೇಲ್‌ ಬೈರಾರೆಡ್ಡಿ ತಿಳಿಸಿದರು.

ADVERTISEMENT

‘ಈ ಶಾಸನವು ರಾಮಾಂಬನ ಮಗನು ತನ್ನ ಸ್ನೇಹಿತರಾದ ಸದೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ಶಂಭುವಿನ ಅಭಿಷೇಕ ಕೈಂಕರ್ಯಕ್ಕೆ ಬಿಟ್ಟ ದತ್ತಿಯನ್ನು ದಾಖಲಿಸುತ್ತದೆ. ಗ್ರಾಮಸ್ಥರ ಆಸಕ್ತಿಯಿಂದ ಇದು ಪತ್ತೆಯಾಗಿದೆ. ಇಲ್ಲಿನ ಎರಡೂ ಶಾಸನಗಳನ್ನು ಸ್ಮಾರಕಗಳ ರೀತಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಇಲ್ಲಿನ ಇತಿಹಾಸವನ್ನು ಸಾರಬೇಕು’ ಎಂದು ಶಾಸನತಜ್ಞ ಪ್ರೊ.ಕೆ.ಆರ್‌.ನರಸಿಂಹನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.