ಉತ್ತನೂರು ರಾಜಮ್ಮ ವೇದಿಕೆ (ಚಿಂತಾಮಣಿ): ಸಾಹಿತ್ಯ ಸಮ್ಮೇಳನಗಳಲ್ಲಿ ಭಾಷೆ, ಸಂಸ್ಕೃತಿ, ಇತಿಹಾಸದ ಬೆಳವಣಿಗೆ ಜತೆಗೆ ಜನತೆ ಸುಖ ದುಃಖಗಳ ಬಗ್ಗೆಯೂ ಚರ್ಚೆ, ಅವಲೋಕನ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ನಗರದ ಬಾಲಕರ ಸರ್ಕಾರಿ ಕಾಲೇಜಿನ ಆವರಣದಲ್ಲಿ ಶನಿವಾರ ದ್ವಿತೀಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರ್ನಾಟಕದ ಕೆಲವು ಭಾಗಗಳು ಹೈದರಾಬಾದ್, ಮುಂಬೈ, ಮದ್ರಾಸ್ ಪ್ರಾಂತ್ಯಗಳಲ್ಲಿ ಸೇರಿಹೋಗಿದ್ದವು. ಏಕೀಕರಣದ ನಂತರ ಆ ಭಾಷೆಗಳ ಜನರು ಇಲ್ಲೇ ನೆಲೆಸಿದರು. ಭಾಷಾ ದೃಷ್ಟಿಯಿಂದಲೂ ರಾಜ್ಯ ವೈವಿಧ್ಯಮಯವಾಗಿದ್ದು, ಇಲ್ಲಿ ಅನೇಕ ಭಾಷೆಗಳ ಜನರಿದ್ದಾರೆ. ಇತರೆ ರಾಜ್ಯಗಳಲ್ಲಿ ಈ ಸಮಸ್ಯೆ ಇಲ್ಲ ಎಂದರು.
ಭಾಷೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆಗಾಗಿ ಅನೇಕ ಸಮಿತಿಗಳನ್ನು ರಚನೆ ಮಾಡಲಾಗಿದೆ. ರಾಜ್ಯದಲ್ಲಿ ನೆಲೆಸಿರುವ ಎಲ್ಲರೂ ಸ್ವಯಂಪ್ರೇರಿತರಾಗಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಮಾತೃಭಾಷೆ ಯಾವುದಾದರೂ ಕನ್ನಡದಲ್ಲಿ ವ್ಯವಹರಿಸುವುದನ್ನು ಕಲಿಯಬೇಕು ಎಂದರು. ತಾಲ್ಲೂಕಿನ ಕೈವಾರ ನಾರಾಯಣಪ್ಪ, ಉತ್ತನೂರು ರಾಜಮ್ಮ, ಲಕ್ಷ್ಮಣರಾವ್ ಮುಂತಾದವರ ಸಾಹಿತ್ಯ ಕೊಡುಗೆಯು ಅಪಾರವಾದುದು ಎಂದು ಸ್ಮರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಸುಧಾರಣೆ, ಭ್ರಷ್ಟಾಚಾರ ಕಡಿಮೆ ಮಾಡುವುದಕ್ಕೆ ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ ನೀರಾವರಿ ಸಮಸ್ಯೆ ನಿವಾರಣೆಗೆ, ಕೆರೆಗಳ ಅಭಿವೃದ್ಧಿಗೆ ಹಾಗೂ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.
ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ, ಸಂಸ್ಕೃತಿಗೆ ಪೂರಕವಾಗಿರುವ ಭಾಷೆ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಇತ್ತೀಚೆಗೆ ಜಾತಿ ದೊಡ್ಡ ಪೆಡಂಭೂತವಾಗಿದ್ದು, ದೇಶ, ರಾಜ್ಯ ಹಾಗೂ ಭಾಷೆ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ರಕ್ಷಿಸಿ ಬೆಳೆಸುವ ಚಿಂತನೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡಬೇಕು. ನಟ ಚಂದ್ರು ನೇತೃತ್ವದ ಗಡಿನಾಡ ಸಮಿತಿ ವರದಿಯನ್ನು ಅನುಷ್ಠಾನಕ್ಕೆ ತರಬೇಕು. ಗಡಿನಾಡ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡಲು, ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಭಾಷೆ, ಇತಿಹಾಸ ಮಹತ್ವದ ಪಾತ್ರ ವಹಿಸುತ್ತವೆ ಎಂದರು. ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಲು ಪೋಷಕರೇ ಕಾರಣ. ಅವರ ಮನಸ್ಸು ಪರಿವರ್ತನೆಯಾಗಬೇಕು. ಯುವ ಪೀಳಿಗೆ ಸಮಾಜ ಮತ್ತು ಸರ್ಕಾರದ ಕಣ್ಣು ತೆರೆಸಬೇಕು. ಜನತೆ ಮನಸ್ಸು ಮಾಡಿದರೆ ಮಾತ್ರ ಕನ್ನಡ ಶಾಲೆಗಳು ಉಳಿಯುತ್ತವೆ, ಸರ್ಕಾರವೊಂದರಿಂದಲೇ ಶಾಲೆಗಳನ್ನು ಸಾಧ್ಯವಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.