ADVERTISEMENT

ಜಾನುವಾರುಗಳಿಗೆ ಮೇವಿನ ಕೊರತೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 11:45 IST
Last Updated 20 ಜುಲೈ 2012, 11:45 IST

ಶಿಡ್ಲಘಟ್ಟ: ತಾಲ್ಲೂಕಿನಲ್ಲಿ ದನಗಳಿಗೆ ಮೇವಿಲ್ಲ ಕುಡಿಯಲು ನೀರಿಲ್ಲ. ಕೂಡಲೇ ಸರ್ಕಾರ ಕ್ರಮ ಕೈಗೊಂಡು ರೈತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಇಲ್ಲಿ ಗುರುವಾರ ಒತ್ತಾಯಿಸಿದರು.

ಧಾರವಾಡದಲ್ಲಿ ಜುಲೈ 21ರಂದು ನಡೆಯಲಿರುವ ರೈತರ ಸಮಾವೇಶದಲ್ಲಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಲಿದ್ದು, ಶುಕ್ರವಾರ ಪ್ರಯಾಣ ಬೆಳೆಸಲಿದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಮಾವೇಶದಲ್ಲಿ ಜಿಲ್ಲೆಯ ರೈತರ ನೀರು, ರೇಷ್ಮೆ ಮತ್ತು ಹಾಲಿನ ಸಮಸ್ಯೆಗಳನ್ನು ಪ್ರಸ್ತಾಪಿಸಲಿದ್ದೇವೆ. ರೈತರ ಆತ್ಮಹತ್ಯೆಗಳನ್ನು ಸರ್ಕಾರ ನಿಲ್ಲಿಸಿಲ್ಲ. ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಲು ಒತ್ತಾಯ ಮಾಡಲಾಗುವುದು ಎಂದು ಹೇಳಿದರು.

`ಅರಣ್ಯ ಇಲಾಖೆ ಕೆರೆಗಳಲ್ಲಿ ಜಾಲಿ ಗಿಡಗಳನ್ನು ನೆಟ್ಟು ನೀರು ನಿಲ್ಲದಂತೆ ಮಾಡಿದ್ದಾರೆ. ಜಾಲಿ ಮರಗಳನ್ನು ಕೂಡಲೇ ತೆಗೆಸಬೇಕು. ರಾಜ್ಯ ಸರ್ಕಾರ ನೀಲಗಿರಿ ಮರಗಳನ್ನು ನೆಡುವುದನ್ನು ನಿಷೇಧಿಸಿದ್ದರೂ ಇನ್ನೂ ಹಲವೆಡೆ ನೀಲಗಿರಿ ಬೆಳೆಸಲಾಗುತ್ತಿದೆ. ಮಳೆ ಆರಂಭವಾಗುತ್ತಿದ್ದಂತೆಯೇ ಅಗತ್ಯ ಇರುವೆಡೆ ಗಿಡಗಳನ್ನು ನೆಡಬೇಕು. ರೈತರು ಸಾಲ ಮಾಡಿ ಕೊಳವೆ ಬಾವಿ ತೋಡಿಸಿರುತ್ತಾರೆ. ಅದಕ್ಕೆ ವಿದ್ಯುತ್ ಇಲಾಖೆ ಶೀಘ್ರವಾಗಿ ಸಂಪರ್ಕ ನೀಡುತ್ತಿಲ್ಲ. 24 ಗಂಟೆಗಳೊಳಗೆ ರೈತರು ಕೊರೆಸುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು~ ಎಂದು  ಆಗ್ರಹಪಡಿಸಿದರು.

ಬೆಂಗಳೂರಿನ ಒಳಚರಂಡಿ ನೀರು ವರ್ತೂರಿನ ಮೂಲಕ ತಮಿಳುನಾಡಿಗೆ ಹೋಗುತ್ತಿದೆ. ಆ ನೀರನ್ನು ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸಿ ಇಲ್ಲಿನ ಕೆರೆಗಳಲ್ಲಿ ಇಂಗಿಸಬೇಕು.

ಇದರಿಂದ ಅಂತರ್ಜಲ ಹೆಚ್ಚಾಗುತ್ತದೆ. ರೇಷ್ಮೆ ಗೂಡಿನ ದರವನ್ನು ಸರ್ಕಾರ 365 ರೂಗೆ ನಿಗದಿಗೊಳಿಸಬೇಕು. ಹಾಲಿನ ದರ 30 ರೂಪಾಯಿಗೆ ಏರಿಸಬೇಕು. ಎಲ್ಲರಿಗೂ ಯೂನಿಟ್ ಪದ್ಧತಿಯಲ್ಲಿ ಆಹಾರ ವಿತರಿಸಬೇಕು. ರಸಗೊಬ್ಬರದ ಬೆಲೆ ಗಗನಕ್ಕೇರಿದೆ. ರೈತರ ಸಮಸ್ಯೆಗಳನ್ನು ಕೂಡಲೇ ಸರ್ಕಾರ ನಿವಾರಿಸಬೇಕು ಎಂದು ಅವರು ಆಗ್ರಹಿಸಿದರು.

 ರೈತ ಮುಖಂಡರಾದ ಶ್ರೀನಿವಾಸ್, ಮುನಿನಂಜಪ್ಪ, ರಾಮಚಂದ್ರಪ್ಪ, ಟಿ.ಕೃಷ್ಣಪ್ಪ, ಅಮರೇಶ್, ಬೈಯಣ್ಣ, ಮಲ್ಲಪ್ಪಣ್ಣ, ಮುನಿವೆಂಕಟರಾಯಪ್ಪ, ಪ್ರಕಾಶ್, ವೈ.ವೆಂಕಟಪ್ಪ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.