ಚಿಕ್ಕಬಳ್ಳಾಪುರ: ನೂತನ ಸರ್ಕಾರ ರಚನೆಯಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡು ಎರಡು ವಾರಗಳ ಬಳಿಕ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಮಂಗಳವಾರ ನಗರಕ್ಕೆ ಆಗಮಿಸಲಿದ್ದು, ಅವರ ಆಗಮನ ಮತ್ತು ಜಿಲ್ಲೆಗೆ ಸಂಬಂಧಿಸಿದಂತೆ ಅವರು ನೀಡುವ ಭರವಸೆಗಳ ಕುರಿತು ಜನರು ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ನಂತರ ಈವರೆಗೆ ಐವರು ಸಚಿವರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದು, ದಿನೇಶ್ ಗುಂಡೂರಾವ್ ಈಗ ಆರನೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಜಿಲ್ಲೆ ಉಸ್ತುವಾರಿ ವಹಿಸಿಕೊಂಡಿದ್ದ ಐವರು ಸಚಿವರು ಬೇರೆ ಬೇರೆ ಹಂತಗಳಲ್ಲಿ ವಿವಿಧ ಕಾರ್ಯಗಳನ್ನು ಕೈಗೊಂಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಶಾಶ್ವತ ಕಾಮಗಾರಿ ಅಥವಾ ಕಾರ್ಯಗಳಾಗಲಿ ನಡೆಯಲಿಲ್ಲ ಎಂದು ಜಿಲ್ಲೆ ಜನರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. `ಹೊಸ ಸರ್ಕಾರ ರಚನೆಯಾದಾಗಲೆಲ್ಲ, ಹೊಸ ಸಚಿವರು ಜಿಲ್ಲೆಯ ಜವಾಬ್ದಾರಿ ತೆಗೆದುಕೊಂಡರು.
ಆದರೆ ಜಿಲ್ಲೆಗೆ ಸಂಬಂಧಿಸಿದಂತೆ ಅಭಿವೃದ್ಧಿ ವಿಷಯ ಪ್ರಸ್ತಾವವಾದಾಗ, ಹೆಚ್ಚಿನ ಕೆಲಸ ನಡೆಯಲಿಲ್ಲ' ಎಂದು ಹೇಳುತ್ತಾರೆ.
2007ರ ಆಗಸ್ಟ್ 23ರಂದು ಕೋಲಾರದಿಂದ ಬೇರ್ಪಟ್ಟು ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ಚಿಕ್ಕಬಳ್ಳಾಪುರಕ್ಕೆ ಪ್ರಥಮ ಉಸ್ತುವಾರಿ ಸಚಿವರಾಗಿ ಆಲಂಗೂರು ಶ್ರೀನಿವಾಸ್ ಕಾರ್ಯನಿರ್ವಹಿಸಿದರು.
ನಂತರದ ವರ್ಷಗಳಲ್ಲಿ ಹೊಸ ಸರ್ಕಾರ ರಚನೆಗೊಂಡ ನಂತರ ಪ್ರೊ.ಮುಮ್ತಾಜ್ ಅಲಿ ಖಾನ್, ವೆಂಕಟಮಣಪ್ಪ, ಶೋಭಾ ಕರಂದ್ಲಾಜೆ ಮತ್ತು ಎ.ನಾರಾಯಣಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದರು. ಆಗಾಗ್ಗೆ ಜಿಲ್ಲಾ ಕೇಂದ್ರಕ್ಕೆ ಮತ್ತು ತಾಲ್ಲೂಕುಗಳಿಗೆ ಭೇಟಿ ನೀಡುತ್ತಿದ್ದ ಸಚಿವರು ವಿವಿಧ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
`ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡ ಸಚಿವರು ಸದಾ ಕಾಲ ಜಿಲ್ಲೆಯಲ್ಲೆ ಇರಬೇಕೆಂದು ನಾವು ಬಯಸುವುದಿಲ್ಲ. ಆದರೆ ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆಯಾದರೂ ಜಿಲ್ಲೆಗೆ ಭೇಟಿ ನೀಡುತ್ತಿದ್ದರೆ, ಜಿಲ್ಲೆಯ ಸಂಪೂರ್ಣ ಪರಿಚಯ ಸಿಗುತ್ತದೆ.
ಜನರು ಎದುರಿಸುತ್ತಿರುವ ಸಮಸ್ಯೆ ಮತ್ತು ಸಂಕಷ್ಟಗಳು ಅರಿವಿಗೆ ಬರುತ್ತದೆ. ಎರಡು-ಮೂರು ತಿಂಗಳಿಗೊಮ್ಮೆ ಭೇಟಿ ನೀಡುತ್ತಿದ್ದರೆ, ಸಚಿವರು ಸಭೆ-ಸಮಾರಂಭಗಳಿಗೆ ಮಾತ್ರ ಸೀಮಿತರಾಗುತ್ತಾರೆ. ಈ ಹಿಂದಿನ ಕೆಲ ಸಚಿವರು ಆಗೊಮ್ಮೆ-ಈಗೊಮ್ಮೆ ಭೇಟಿ ನೀಡುತ್ತಿದ್ದರು' ಎಂದು ರೈತ ಮುಖಂಡ ರವಿಚಂದ್ರರೆಡ್ಡಿ `ಪ್ರಜಾವಾಣಿ'ಗೆ ತಿಳಿಸಿದರು.
`ಮುಖ್ಯಮಂತ್ರಿಯೊಂದಿಗೆ ಇಲ್ಲವೇ ಕೇಂದ್ರ ಸಚಿವರೊಂದಿಗೆ ಬರುತ್ತಿದ್ದ ಸಚಿವರು ಸಭೆ-ಸಮಾರಂಭಗಳಲ್ಲಿ ಪಾಲ್ಗೊಂಡು ಮರಳುತ್ತಿದ್ದರು. ಇಲ್ಲವೇ ಜಿಲ್ಲಾ ಪಂಚಾಯಿತಿಯಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿ, ಬೆಂಗಳೂರಿಗೆ ವಾಪಸು ಹೋಗುತ್ತಿದ್ದರು. ನೂತನ ಕಟ್ಟಡ ನಿರ್ಮಾಣಗೊಂಡಾಗಲೆಲ್ಲ, ಉದ್ಘಾಟನೆಗೆ ಖುದ್ದಾಗಿ ಹಾಜರಾಗುತ್ತಿದ್ದರು. ಆದರೆ ಜನರೊಂದಿಗೆ ಸಂವಾದ ನಡೆಸುವ, ಕುಂದು-ಕೊರತೆ ಆಲಿಸುವುದಕ್ಕೆ ಸಂಪೂರ್ಣ ನಿರ್ಲಕ್ಷ್ಯ ತೋರಲಾಗುತ್ತಿತ್ತು.
ಇಂತಹವರು ನಮ್ಮ ಜಿಲ್ಲೆ ಉಸ್ತುವಾರಿ ಸಚಿವರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆವು. ಆದರೆ ಅವರು ನಮ್ಮಂತಹ ರೈತರು ಮತ್ತು ಜನಸಾಮಾನ್ಯರೊಂದಿಗೆ ಮಾತನಾಡದೇ ವಾಪಸ್ ಹೋಗುತ್ತಿದ್ದಾಗ, ತುಂಬ ಬೇಸರವಾಗುತ್ತಿತ್ತು, ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶವೇ ಸಿಗಲಿಲ್ಲ' ಎಂದರು.
ವಿವಿಧ ಕಾರ್ಯಕ್ರಮಗಳು
ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳವಾರ (ಜೂನ್ 18) ಜಿಲ್ಲೆಗೆ ಆಗಮಿಸಲಿದ್ದಾರೆ. ತಾಲ್ಲೂಕಿನ ಮುದ್ದೇನಹಳ್ಳಿಗೆ ಬೆಳಿಗ್ಗೆ 9.30ಕ್ಕೆ ಭೇಟಿ ನೀಡುವ ಅವರು ಅಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆ. ಬಳಿಕ ನಗರಕ್ಕೆ ಬಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.
ಬೆಳಿಗ್ಗೆ 11ಕ್ಕೆ ನಗರದ ಪ್ರವಾಸಿಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಾರೆ. ಮಧ್ಯಾಹ್ನ 2ಕ್ಕೆ ನಿರ್ಮಾಣ ಹಂತದಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ನಿರ್ಮಾಣ ಕಾಮಗಾರಿ ಪರಿಶೀಲಿಸುತ್ತಾರೆ. ನಂತರ ಮಧ್ಯಾಹ್ನ 3ಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುವ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.
ಸಂಜೆ 5.30ಕ್ಕೆ ಜಿಲ್ಲೆಯಿಂದ ನಿರ್ಗಮಿಸಲಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.