ADVERTISEMENT

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕಚೇರಿಗೆ ಬೀಗ ಮುದ್ರೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 7:55 IST
Last Updated 20 ಮಾರ್ಚ್ 2012, 7:55 IST

ಚಿಕ್ಕಬಳ್ಳಾಪುರ:  ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲಾಡಳಿತ ಸೇರಿದಂತೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋ ಪಿಸಿ ವಿವಿಧ ದಲಿತ ಸಂಘಟನೆಗಳ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಭಾಗವಾಗಿ ದಲಿತ ಸಂಘಟನೆಗಳ ಸದಸ್ಯರು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಗೆ ಬೀಗ ಜಡಿ ಯಲು ಮುಂದಾದಾಗ, ಪೊಲೀಸರು ಬಲ ಪ್ರಯೋಗ ದಿಂದ ನಿಯಂತ್ರಿಸಲು ಯತ್ನಿಸಿದರು. ಇದರಿಂದಾಗಿ ಕೆಲ ನಿಮಿಷಗಳ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕಚೇರಿಗೆ ಬೀಗ ಜಡಿಯಲು ಪೊಲೀಸರು ಅವಕಾಶ ನೀಡದ ಕಾರಣ ಆಕ್ರೋಶಗೊಂಡ ವಿವಿಧ ಸಂಘಟನೆಗಳ ಸದಸ್ಯರು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಬಿ.ಬಿ.ರಸ್ತೆಯಲ್ಲಿ ರಸ್ತೆತಡೆ ನಡೆಸಿದರು. ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದ ಕಾರಣ ಬಹುತೇಕ ಎಲ್ಲ ವಾಹನಗಳನ್ನು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಯಿತು.

ಪರಿಸ್ಥಿತಿ ತಿಳಿಗೊಳ್ಳುವವರಗೆ ಇಲಾಖೆ ಕಚೇರಿ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ವಿವರ: ಜಿಲ್ಲಾಜಾಗೃತಿ ಮತ್ತು ಉಸ್ತುವಾರಿ ಸಮಿತಿ, ದಲಿತ ಸಂಘರ್ಷ ಸಮಿತಿ ಸಂಘಟನೆ, ದಲಿತ ಮಹಿಳಾ ಒಕ್ಕೂಟ, ದಲಿತ ವಿದ್ಯಾರ್ಥಿ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಸೋಮವಾರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಇಲಾಖೆ ಕಚೇರಿಗೆ ಬೀಗ ಮುದ್ರೆ ಹಾಕಿ ಪ್ರತಿಭಟಿಸಲು ನಿರ್ಧರಿಸಿದ್ದ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯಿಂದಲೇ ಇಲಾಖೆ ಕಚೇರಿ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪೊಲೀಸ್ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.

ತಮಟೆಗಳನ್ನು ಬಾರಿಸುತ್ತ ಇಲಾಖೆ ಕಚೇರಿಗೆ ಪ್ರತಿಭಟನಾ ಕಾರರು ಬರುತ್ತಿರುವುದನ್ನು ಗಮನಿಸಿದ ಪೊಲೀಸರು ಇನ್ನಷ್ಟು ಬಿಗಿ ಬಂದೋಬಸ್ತ್ ಕಲ್ಪಿಸಿದರು. ಸ್ಥಳದಲ್ಲಿ ಸುಮಾರು ಅರ್ಧ ಗಂಟೆ ಕಾಲ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಕೆ.ಸಿ.ರಾಜಾಕಾಂತ್, ಸು.ದಾ.ವೆಂಕಟೇಶ್ ಮಾತನಾಡಿದರು. ಬಳಿಕ ಪ್ರತಿಭಟನಾಕಾರರು ಕಚೇರಿಯತ್ತ ನುಗ್ಗಲು ಯತ್ನಿಸಿ ದಾಗ ಪೊಲೀಸರು ಬಲಪ್ರಯೋಗದ ಮೂಲಕ ತಡೆದರು.

ಇದರಿಂದಾಗಿ ನೂಕು ನುಗ್ಗಾಟ ಉಂಟಾಯಿತು. ಒಂದೆಡೆ ಪ್ರತಿಭಟನೆಕಾರರು ಪಟ್ಟು ಹಿಡಿದು ನುಗ್ಗಲೆತ್ನಿಸುತ್ತಿದ್ದರೆ, ಮತ್ತೊಂದೆಡೆ ಪೊಲೀಸರು ಬಲವಾಗಿ ಅವರನ್ನು ತಡೆ ಯುತ್ತಿದ್ದರು. ನೂಕುನುಗ್ಗಾಟದ ನಂತರವೂ ಕಚೇರಿಯತ್ತ ಹೋಗಲು ವಿಫಲವಾದಾಗ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಬಿ.ಬಿ.ರಸ್ತೆ ಮಧ್ಯೆದಲ್ಲಿ ಕೂತುಕೊಂಡು ರಸ್ತೆ ತಡೆ ನಡೆಸಿದರು. `ಕಚೇರಿಗೆ ಬೀಗಮುದ್ರೆ ಹಾಕುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ.
 
ಭ್ರಷ್ಟ ಅಧಿಕಾರಿಗಳು ವರ್ಗ ವಾಗುವವರೆಗೆ ಧರಣಿ ಹಿಂಪಡೆಯುವುದಿಲ್ಲ~ ಎಂದು ಎಚ್ಚರಿಕೆ ನೀಡಿದರು.
ಈ ಬೆಳವಣಿಗೆಯಿಂದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಎಲ್ಲ ವಾಹನಗಳನ್ನು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಟ್ಟರು.

ಪ್ರತಿಭಟನೆ ಹಿಂಪಡೆ ಯುವಂತೆ ಪ್ರತಿಭಟನಾಕಾರರಿಗೆ ಪೊಲೀಸರು ಕೋರಿದರು. ಹಲವು ಬಾರಿ ಮನವಿ ಮಾಡಿದ ನಂತರವೂ ಪ್ರತಿಭಟ ನಾಕಾರರು ಮಣಿಯದಿದ್ದಾಗ ವಿಷಯವನ್ನು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ಬಿ.ಎಸ್.ಶೇಖರಪ್ಪ ಅವರು ಮನವಿಪತ್ರ ಸ್ವೀಕರಿ ಸಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ಡಿವೈಎಸ್ಪಿ ಎಂ.ಎಸ್.ಕಾಖಂಡಕಿ, ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ಎಸ್.ಮಹೇಶ್‌ಕುಮಾರ್, ಎಸ್.ಬಿ.ಛಬ್ಬಿ, ಸಬ್‌ಇನ್ಸ್‌ಪೆಕ್ಟರ್‌ಗಳಾದ ವಸಂತ್, ಬಿ.ಐ.ರೆಡ್ಡಿ, ನಯಾಜ್‌ಬೇಗ್, ಸಾದಿಕ್ ಪಾಷಾ ಮತ್ತಿತರ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿದ್ದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪ್ರಮುಖ ಬೇಡಿಕೆಗಳು

*  ಸಚಿವ ಎ.ನಾರಾಯಣಸ್ವಾಮಿ ಭರವಸೆ ಅನುಷ್ಠಾನಗೊಳಿಸಬೇಕು

* ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಕೈಗೊಳ್ಳಲಾದ   
     ನಿರ್ಣಯಗಳು  ಜಾರಿಯಾಗಬೇಕು

* ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯನ್ನು  
      ವರ್ಗಾಯಿಸಬೇಕು

* ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವಿಜಯೇಂದ್ರಬಾಬು
     ಅವರನ್ನು  ವರ್ಗಾಯಿಸಬೇಕು

* ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕೃಷ್ಣಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.