ವಿಶೇಷ ವರದಿ
ಚಿಕ್ಕಬಳ್ಳಾಪುರ:ಜಿಲ್ಲೆಯು ರೇಷ್ಮೆ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಮಾತ್ರವಲ್ಲ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದ್ಲ್ಲಲೂ ಕೂಡ ತನ್ನದೇ ಆದ ಛಾಪು ಹೊಂದಿದೆ.
ಕವಿ ಬಿ.ಆರ್.ಲಕ್ಷ್ಮಣರಾವ್, ಸಾಹಿತಿ ಹಂಪ ನಾಗರಾಜಯ್ಯ ಸೇರಿದಂತೆ ಜಿಲ್ಲೆಯ ಸಾಹಿತಿಗಳು, ಕವಿಗಳು ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ಸಲ್ಲಿಸಿದ್ದಾರೆ. ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಚಿಕ್ಕಬಳ್ಳಾಪುರದ ನಂದಿ ರಂಗಮಂದಿರದಲ್ಲಿ ಮೇ 4 ಮತ್ತು 5ರಂದು ಜ್ಲ್ಲಿಲಾ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯ ಸಾಹಿತಿಗಳು, ಕವಿಗಳು ಮತ್ತು ಸಾಂಸ್ಕೃತಿಕ ಕ್ಷೇತ್ರದ ಕಲಾವಿದರನ್ನು ನೆನಪಿಸುವುದು ಅಗತ್ಯ. ಅಕ್ಷರ ಲೋಕಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿದವರ ಬಗ್ಗೆ ಕೆಲವರ ಒಂದಿಷ್ಟು ಮಾಹಿತಿ ಇಲ್ಲಿದೆ.
ಬಿ.ಆರ್.ಲಕ್ಷ್ಮಣರಾವ್: ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲದಲ್ಲಿ 1944 ರಲ್ಲಿ ಜನಿಸಿದ ಬಿ.ಆರ್.ಲಕ್ಷ್ಮಣರಾವ್ ಆರಂಭದ ವಿದ್ಯಾಭ್ಯಾಸವನ್ನು ದಾವಣಗೆರೆಯಲ್ಲಿ ಪೂರೈಸಿದರು.
ಸಾಹಿತ್ಯ ಕ್ಷೇತ್ರದ ಬಗ್ಗೆ ತೀವ್ರ ಆಸಕ್ತಿ ಹೊಂದಿದ ಅವರು ಕಿರಿಯ ವಯಸ್ಸಿನಲ್ಲೇ ಟುವಿಟಾರ್, ಲಲ್ಲಿ ಪುಟ್ಟಿಯ ಹಂಬಲ ಮತ್ತು ಶಾಂಗ್ರೀಲಾ ಎಂಬ ಕವನ ಸಂಕಲನಗಳನ್ನು ಹೊರ ತಂದರು. ಪ್ರೇಮ ಕವಿತೆ ಮತ್ತು ಹನಿಗವಿತೆಗಳ ರಚನೆಗೆ ಹೆಚ್ಚಿನ ಆದ್ಯತೆ ನೀಡಿದ ಅವರು ನಂತರದ ದಿನಗಳಲ್ಲಿ ಹಲವು ಕೃತಿಗಳನ್ನು ಹೊರತಂದರು.
ಈಗ ಚಿಂತಾಮಣಿಯಲ್ಲಿ ನೆಲೆಸಿರುವ ಅವರನ್ನು ಸಾಹಿತ್ಯಾಭಿಮಾನಿಗಳು ನಿತ್ಯ ಭೇಟಿಯಾಗುತ್ತಾರೆ. ಪ್ರಸ್ತುತ ಸನ್ನಿವೇಶ, ಸಾಹಿತ್ಯ ಅವಲೋಕನ ಮುಂತಾದ ವಿಷಯಗಳ ಬಗ್ಗೆ ಅವರು ಚರ್ಚಿಸುತ್ತಾರೆ. ಕಳೆದ ವರ್ಷ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಾಗ, ಅಭಿನಂದನೆಯ ಮಹಾಪೂರವೇ ಹರಿದು ಬಂದಿತ್ತು.
ಹಂಪ ನಾಗರಾಜಯ್ಯ: ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರ ಗ್ರಾಮದಲ್ಲಿ ಜನಿಸಿದ ಹಂಪನಾ ಪೂರ್ಣ ಹೆಸರು ಪ್ರೊ. ಹಂಪಸಂದ್ರ ಪದ್ಮನಾಭಯ್ಯ ನಾಗರಾಜಯ್ಯ. ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರ ದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಹಿನ್ನೆಲೆ ಯಲ್ಲಿ ಅವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
1978 ರಿಂದ 1986ರ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಗಿದ್ದ ಹಂಪನಾ ಅವರು ಹಲವು ಯಶಸ್ವಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಹೊಸ ರೂಪ ನೀಡಿದ ಅವರು ಸಾಹಿತ್ಯಕ್ಕೆ ಮಾತ್ರವೇ ಸೀಮಿತವಾಗದೇ ಇತಿಹಾಸ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಪಾತ್ರರಾಗಿದ್ದಾರೆ.
ಟಿ.ಎನ್.ಸೀತಾರಾಂ: ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ ಅವರು ಆರಂಭಿಕ ದಿನಗಳಲ್ಲಿ ವಕೀಲಿ ವೃತ್ತಿಯನ್ನು ಕೈಗೊಂಡಿದ್ದು ಗೌರಿಬಿದನೂರಿನಲ್ಲಿ.
ಗೌರಿಬಿದನೂರು ಅವರಿಗೆ ಅಚ್ಚುಮೆಚ್ಚಿನ ಊರಾಗಿದ್ದು, ತಮ್ಮ ಹೆಸರಿನೊಂದಿಗೆ ಗೌರಿಬಿದನೂರು ಹೆಸರನ್ನು ಸೇರಿಸಲು ಎಂದಿಗೂ ಮರೆಯುವುದಿಲ್ಲ. ವಕೀಲರಾಗಿದ್ದರೂ ರಂಗಭೂಮಿ, ಟಿವಿ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಅವರು ಆಯಾ ಕ್ಷೇತ್ರಗಳಲ್ಲಿಯೇ ಯಶಸ್ಸು ಗಳಿಸಿದರು.
`ಆಸ್ಫೋಟ~, `ನಮ್ಮೊಳಗೊಬ್ಬ ನಾಜೂಕಯ್ಯ~ ಮುಂತಾದ ನಾಟಕ ಗಳು ಅವರಿಗೆ ಹೆಸರು ತಂದುಕೊಟ್ಟವು. ಕಿರುತೆರೆಯಲ್ಲಿ ಪ್ರಸಾರವಾದ `ಮಾಯಾಮೃಗ~, `ಮುಕ್ತ~, `ಮನ್ವಂತರ~, `ಮುಕ್ತಮುಕ್ತ~ ಅವರಿಗೆ ಜನ ಪ್ರಿಯತೆ ತಂದುಕೊಟ್ಟವು.
ವಿಚಾರವಾದಿ ಎಚ್.ನರಸಿಂಹಯ್ಯ ಅವರಿಂದ ಹಲವು ಸಂಗತಿಗಳನ್ನು ಕಲಿತಿದ್ದೇನೆ ಎಂದು ಆಗಾಗ್ಗೆ ಅವರು ಹೇಳುತ್ತಾರೆ.ಇವರಂತೆಯೇ ಹಲವು ಜನರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ಸಲ್ಲಿಸಿದ್ದಾರೆ.
ನಿಡುಮಾಮಿಡಿ ಮಠದ ಡಾ. ಜಚನಿ, ಕನ್ನಡ ಪರಿಚಾರಕ ರಾಜು ಮೇಷ್ಟ್ರು. ವೈ.ಎನ್.ಗುಂಡಪ್ಪ, ಸಾಹಿತಿ ಲಕ್ಷ್ಮಿನರಸಿಂಹಶಾಸ್ತ್ರಿ, ಡಾ.ಎಲ್.ಬಸವ ರಾಜು,ಎನ್.ಬಸವಾರಾಧ್ಯ, ಕವಿ ಮಂಡಿಕಲ್ ರಾಮಾಶಾಸ್ತ್ರಿ, ಸಾಹಿತಿಗಳಾದ ಬಿ.ಜಿ.ಸತ್ಯಮೂರ್ತಿ, ಸಿ.ಕೆ.ನಾಗರಾಜರಾವ್, ವೇದಾಂತಂ ವೆಂಕಟರೆಡ್ಡಿ, ಗಾಯಕ ಬಿ.ಎಸ್.ರಾಮಾಚಾರ್, ಕಲಾವಿದ ಟಂಕಸಾಲೆ, ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಪತ್ರಕರ್ತ ತೀ.ತಾ.ಶರ್ಮಾ ಮತ್ತಿತರರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.