ADVERTISEMENT

ಜೆಡಿಎಸ್ ಅಧಿಕಾರಕ್ಕೆ ಬಂದರೆ ಶಾಶ್ವತ ನೀರಾವರಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 6:30 IST
Last Updated 1 ಅಕ್ಟೋಬರ್ 2012, 6:30 IST

ಗೌರಿಬಿದನೂರು: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತಂದಲ್ಲಿ, ಚಿಕ್ಕಬಳ್ಳಾಪುರ ಸೇರಿದಂತೆ ಇತರ ಆರು ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಪಟ್ಟಣದ  ಆಚಾರ್ಯ ಕಾಲೇಜಿನ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಜೆಡಿಎಸ್ ಬೃಹತ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, `ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ, ಬಯಲುಸೀಮೆ ಬರಪೀಡಿತ ಜಿಲ್ಲೆಗಳಿಗೆ ನಿಶ್ಚಿತವಾಗಿ ನೀರು ಹರಿಸಲಿದೆ~ ಎಂದರು.

`ಬರಪೀಡಿತ ಬಯಲುಸೀಮೆ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಮತ್ತು ಅಭಿವೃದ್ಧಿಪಡಿಸಲು ಯಾವುದೆ ರಾಜಕಾರಣಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಬರಡು ಜಿಲ್ಲೆಗಳತ್ತ ಸಂಪೂರ್ಣ ನಿರ್ಲಕ್ಷ್ಯ ತೋರಲಾಗಿದೆ.

ಜೆಡಿಎಸ್ ಚುನಾವಣೆಯಲ್ಲಿ ಜಯಗಳಿಸಿ, ಅಧಿಕಾರಕ್ಕೆ ಬಂದಲ್ಲಿ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸುತ್ತದೆ. ಬಹುದಿನಗಳಿಂದ ಕಾಡುತ್ತಿರುವ ನೀರು ಮತ್ತು ನೀರಾವರಿ ಸಮಸ್ಯೆಯನ್ನು ಪರಿಹರಿಸಲಿದೆ~ ಎಂದು ಅವರು ಹೇಳಿದರು.

`ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಲಿಲ್ಲ. ಆದರೆ ಈಗ ಸಾಲ ಮನ್ನಾ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಅವರ ಆಡಳಿತವಧಿಯಲ್ಲಿ ಯಾಕೆ ಈ ರೀತಿಯ ಕ್ರಮವನ್ನು ಅವರು ತೆಗೆದುಕೊಳ್ಳಲಿಲ್ಲ. ಅವರು ಪದೇ ಪದೇ ಒಂದಿಲ್ಲೊಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ~ ಎಂದರು.

`ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಪ್ಪತ್ತೈದು ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ರೈತರ ಸಾಲ ಮನ್ನಾ ಮಾಡಿದೆ.  ಆದರೆ  ಬಿಜೆಪಿ  ಸರ್ಕಾರವು  25 ಸಾವಿರದೊಳಗೆ ಸಾಲ ಮನ್ನಾ ಮಾಡಿದರೂ ಅದರ ಅನುಷ್ಠಾನವನ್ನೂ ಸಮರ್ಪಕವಾಗಿ ಮಾಡುತ್ತಿಲ್ಲ.

ನನ್ನ  20 ತಿಂಗಳ  ಅಧಿಕಾರ ಅವಧಿಯಲ್ಲಿ 189 ಕಾಲೇಜುಗಳನ್ನು  ಸ್ಥಾಪಿಸಲಾಯಿತು. ಸೈಕಲ್ ವಿತರಣೆ, ವೃದ್ಧಾಪ್ಯ ವೇತನ, ವಿಧವಾ ವೇತನ, ಭಾಗ್ಯಲಕ್ಷ್ಮಿ ಯೋಜನೆ  ಮತ್ತಿತರ  ಪ್ರಗತಿಪರ ಯೋಜನೆಗಳು ಜಾರಿಗೆ ತರಲಾಯಿತು~ ಎಂದರು.

ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಎನ್.ಜ್ಯೋತಿರೆಡ್ಡಿ, ಮಾಜಿ ಶಾಸಕ ಅಶ್ವತ್ಥನಾರಾಯಣರೆಡ್ಡಿ, ಜೆಡಿಎಸ್ ಗೌರವಾಧ್ಯಕ್ಷ ನಾರಾಯಣಸ್ವಾಮಿ, ಸಂಸದ ಚೆಲುವರಾಯಸ್ವಾಮಿ, ಜೆಡಿಎಸ್ ಪರಿಶಿಷ್ಟ ಪಂಗಡದ ರಾಜ್ಯ ಘಟಕದ ಚಿಕ್ಕಮಾಧು, ಜೆಡಿಎಸ್ ಯುವ ರಾಜ್ಯ ಘಟಕದ ಮಧುಬಂಗಾರಪ್ಪ, ಶಾಸಕ ಬಚ್ಚೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ, ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಮರೆಡ್ಡಿ, ವಕ್ತಾರ ಹೊಸೂರು ಹರಿ, ಪುರಸಭೆ ಸದಸ್ಯರಾದ  ಕೆ.ಎಸ್.ಅನಂತರಾಜ್, ಮಂಜುನಾಥ್, ಪದ್ಮಾವತಮ್ಮ, ಜಾಮೀನ್‌ರಾಜಾ, ವೇಮಾರೆಡ್ಡಿ, ಎನ್.ವೇಣುಗೋಪಾಲ್, ನಾಚಕುಂಟೆ ಗೋಪಾಲ್,ಶಿವಶಂಕರ್, ಪ್ರಭ ನಾರಾಯಣಗೌಡ,ಪಿಗ್ಮಿಗೋವಿಂದಪ್ಪ, ಸಲೀಂ  ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.