ADVERTISEMENT

ದುಬಾರಿ ನೋಂದಣಿ ಶುಲ್ಕ: ಆರೋಪ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 10:08 IST
Last Updated 3 ಏಪ್ರಿಲ್ 2013, 10:08 IST

ಶಿಡ್ಲಘಟ್ಟ: ಗುಡಿಸಲುರಹಿತ ಗ್ರಾಮಗಳಿಗೆಂದು ಬಸವ ವಸತಿ ಯೋಜನೆ ಮತ್ತು ಆಶ್ರಯ ಯೋಜನೆಯಡಿ ಸುಮಾರು 4000 ಮನೆಗಳನ್ನು ತಾಲ್ಲೂಕಿನಲ್ಲಿ ಮಂಜೂರು ಮಾಡಲಾಗಿದೆ. ಆದರೆ ನೋಂದಣಿ ಕಾರ್ಯಕ್ಕೆ ಅಧಿಕಾರಿಗಳು ಹಣ ಕೇಳುತ್ತಿದ್ದಾರೆ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.

`ತಾಲ್ಲೂಕಿನ ಪಲಿಚೆರ್ಲು, ಬಶೆಟ್ಟಹಳ್ಳಿ, ಎಸ್.ದೇವಗಾನಹಳ್ಳಿ, ಚೀಮಂಗಲ ಮುಂತಾದ ಗ್ರಾಮ ಪಂಚಾಯಿತಿಗಳಿಂದ ನಾವು ಫಲಾನುಭವಿಗಳು ಬರುತ್ತೇವೆ. ಅದರ ನೋಂದಣಿ ಕಾರ್ಯಕ್ಕೆ 175 ರೂಪಾಯಿ ಮಾತ್ರವೇ ತಗುಲುತ್ತದೆ. ಆದರೆ ನಮ್ಮಿಂದ 500 ರಿಂದ 4000 ರೂಪಾಯಿ ಹಣ ತೆಗೆದುಕೊಳ್ಳಲಾಗುತ್ತಿದೆ. ಇದನ್ನು ಅಧಿಕಾರಿಗಳಿಗೆ ಪ್ರಶ್ನಿಸಿದರೆ, ಅವರು ನಮ್ಮನ್ನೇ ಬೆದರಿಸುತ್ತಾರೆ. ನಮ್ಮ ಹೆಸರುಗಳನ್ನು ಪಟ್ಟಿಯಿಂದ ತೆಗೆಸುವುದಾಗಿ  ಹೆದರಿಸುತ್ತಾರೆ' ಎಂದು ಫಲಾನುಭವಿಗಳು ಆರೋಪಿಸಿದರು.

`75 ಸಾವಿರ ರೂಪಾಯಿಗಳಷ್ಟು ಸಹಾಯಧನ ಐದು ಹಂತದಲ್ಲಿ ಫಲಾನುಭವಿಗೆ ನೇರವಾಗಿ ಅವರ ಖಾತೆಗೆ ಜಮಾ ಆಗುತ್ತದೆ. ನಿರ್ವಸಿತರು ಮತ್ತು ಗುಡಿಸಲಲ್ಲಿ ವಾಸಿಸುವವರು ವಸತಿ ಹೊಂದಬೇಕೆಂಬ ಯೋಜನೆಯು ಕೆಲವು ಅಧಿಕಾರಿಗಳಿಂದ ಬಡವರ ಶೋಷಣೆಯ ಮಾರ್ಗವಾಗಿ ಪರಿಣಮಿಸಿದೆ' ಎಂದು ಅವರು ತಿಳಿಸಿದರು. 

ಇದರ ಕುರಿತು ಪ್ರತಿಕ್ರಿಯೆ ನೀಡಿದ ಬಸವ ವಸತಿ ಯೋಜನೆಯ ಸಹಾಯಕ ಅಧಿಕಾರಿ ಮಂಜುಳಾ, ಛಾಪಾ ಕಾಗದ ಮುಂತಾದವುಗಳಿಗಾಗಿ ಹೆಚ್ಚುವರಿ ಹಣ ಪಡೆದಿರುವ ಸಾಧ್ಯತೆಯಿದೆ' ಎಂದರು. `ಫಲಾನುಭವಿಗಳಿಂದ ನೇರವಾದ ಲಿಖಿತವಾದ ದೂರು ಬಂದಿಲ್ಲ. ಬಂದಲ್ಲಿ ಕ್ರಮ ಕೈಗೊಳ್ಳುತ್ತೇವೆ' ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ದೇವರಾಜೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.