ಚಿಂತಾಮಣಿ: ದೇಶದಲ್ಲಿ ಶಿಕ್ಷಣಕ್ಕಾಗಿ ಹಾಕಿಕೊಳ್ಳುತ್ತಿರುವ ದೊಡ್ಡ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಹೇಳಿಕೊಳ್ಳುವಂಥ ಫಲಿತಾಂಶ ಬರುತ್ತಿಲ್ಲ ಎಂದು ಪ್ರಾಧ್ಯಾಪಕ ಡಾ.ಕೋಡಿರಂಗಪ್ಪ ಅಭಿಪ್ರಾಯ ಪಟ್ಟರು.
ನಗರದ ಬಾಲಕರ ಸರ್ಕಾರಿ ಕಾಲೇಜಿನ ಆವರಣದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ `ಗಡಿನಾಡಿನಲ್ಲಿ ಶಿಕ್ಷಣ, ಸಾಹಿತ್ಯ ಹಾಗೂ ಬೆಳವಣಿಗೆ ಮಾರ್ಗೋಪಾಯ ವಿಷಯ ಕುರಿತು ಮಾತನಾಡಿದರು.
ಜಿಲ್ಲೆಯ ಇತಿಹಾಸ ಗಮನಿಸಿದಾಗ ಎಂ.ವಿಶ್ವೇಶ್ವರಯ್ಯ, ಎಚ್.ನರಸಿಂಹಯ್ಯ, ಜ.ಚ.ನಿ, ಮಾಸ್ತಿ, ಡಿವಿಜಿ ಶಿಕ್ಷಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಕಡಿಮೆ ಇರುವುದರಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ಹಿಂದೆ ಕೆಪಿಎಸ್‌ಸಿಯನ್ನು `ಕೋಲಾರ ಪಬ್ಲಿಕ್ ಸರ್ವೀಸ್' ಎಂದು ಕರೆಯುತ್ತಿದ್ದರು. ಜಿಲ್ಲೆಯ ಅಧಿಕ ಜನರು ಕೆಎಎಸ್ ಅಧಿಕಾರಿಗಳಾಗಿ ನೇಮಕಗೊಳ್ಳುತ್ತಿದ್ದರು. ಈಚೆಗೆ ಕಡ್ಡಾಯ ಶಿಕ್ಷಣ ಜಾರಿಗೆ ತಂದರೂ ಗುಣಮಟ್ಟದ ಶಿಕ್ಷಣದ ಆಶಯಗಳು ಈಡೇರುತ್ತಿಲ್ಲ ಎಂದು ತಿಳಿಸಿದರು.
ನೇಮಕಾತಿಯಲ್ಲಿ ಅಂಕಗಳನ್ನು ಮಾತ್ರ ಪರಿಗಣಿಸುವುದರಿಂದ ಬುದ್ದಿವಂತ ಶಿಕ್ಷಕರೆಲ್ಲ ಸರ್ಕಾರಿ ಶಾಲೆಗಳಲ್ಲಿದ್ದಾರೆ. ಬುದ್ದಿವಂತ ಮಕ್ಕಳೆಲ್ಲ ಖಾಸಗಿ ಶಾಲೆಗಳಲ್ಲಿ ಇದ್ದಾರೆ. ಒಬ್ಬ ದಡ್ಡ ಹುಡುಗ ಬುದ್ದಿವಂತ ಶಿಕ್ಷಕನಿಂದ ಕಲಿಯುವುದಕ್ಕಿಂತ ಹೆಚ್ಚಾಗಿ ಒಬ್ಬ ಬುದ್ದಿವಂತ ಹುಡುಗ ಸಾಧಾರಣ ಶಿಕ್ಷಕನಿಂದ ಕಲಿಯುತ್ತಾನೆ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ. ಶಾಲೆಗಳನ್ನು ಮುಚ್ಚಲು ಸಹ ಇದೇ ಕಾರಣ. ಪಾಲಕರು ಇದನ್ನು ಅರಿಯಬೇಕು. ಮನೆ ಮನೆಯೂ ಪಾಠಶಾಲೆಯಾಗಬೇಕು ಎಂದರು.
ಖಾಸಗಿ ಶಾಲೆಗಳು ಹಾಗೂ ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷೆ ನಿರ್ಲಕ್ಷ್ಯಿಸುತ್ತಾರೆ. ಕಾಲೇಜಿಗಳಲ್ಲಿ ಸಾಹಿತ್ಯಕ್ಕೆ ಅವಕಾಶವೇ ಇಲ್ಲದಂತಾಗಿದೆ. ಅದರಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನದ ವಿದ್ಯಾರ್ಥಿಗಳು ಕನ್ನಡವನ್ನು ಪರಿಗಣಿಸುವುದೇ ಇಲ್ಲ. ಸಾಹಿತ್ಯ, ಸಂಸ್ಕೃತಿ ಮತ್ತು ಶಿಕ್ಷಣ ಒಂದಕ್ಕೊಂದು ಸಂಬಂಧವಿರುವುದರಿಂದ ಇವೆಲ್ಲವೂ ಬೆಳೆದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು. ಸಮ್ಮೇಳನಾಧ್ಯಕ್ಷ ಕೆ.ವಿ.ನಾಗಸುಬ್ರಮಣ್ಯಂ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.