ಚಿಂತಾಮಣಿ: ತಾಲ್ಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜೂ.22, 23ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಸಲು ಅಂತಿಮ ಹಂತದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಇಲ್ಲಿ ತಿಳಿಸಿದರು.
ನಗರಸಭೆಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಮ್ಮೇಳನದಲ್ಲಿ ಜನಪದ ನೃತ್ಯಗಳು, ಡೊಳ್ಳು ಕುಣಿತ, ವೀರಗಾಸೆ ನೃತ್ಯ, ಸ್ತಬ್ಧಚಿತ್ರಗಳು, ಅಂಬಾರಿಯಲ್ಲಿ ಭುವನೇಶ್ವರಿ ಸೇರಿದಂತೆ ಸಮ್ಮೇಳನಾಧ್ಯಕ್ಷರ ಭವ್ಯವಾದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಸಮ್ಮೇಳನಕ್ಕೆ ತಲುಪುತ್ತದೆ.
ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಪ್ರತಿಭಾ ಪುರಸ್ಕಾರ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿರುವ 10 ಮಂದಿಗೆ ತಲಾ 5 ಸಾವಿರ ರೂಪಾಯಿಯಂತೆ ನಗದು ಬಹುಮಾನ ವಿತರಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷವಾಗಿ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರಗಳ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳಿಗೆ ಸೇರಿ ಸುಮಾರು 30 ಮಳಿಗೆಗಳನ್ನು ತೆರೆಯಲು ಬೇಡಿಕೆ ಬಂದಿದೆ ಎಂದರು.
ಸಮ್ಮೇಳನದ ವಿವಿಧ ಸಮಿತಿಗಳ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ವರದಿ ಮಂಡಿಸಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಎ.ಎಸ್.ನಾಗರಾಜ್,ನಗರಸಭೆ ಸದಸ್ಯರಾದ ಶ್ರೀನಿವಾಸರೆಡ್ಡಿ, ಪ್ರಕಾಶ್, ಮಂಜುನಾಥ್, ರಾಮಮೂರ್ತಿ, ಬಿಇಒ ಕೆ.ಜಿ.ರಂಗಯ್ಯ, ರೇಷ್ಮೆ ಇಲಾಖೆ ಅಧಿಕಾರಿ ಕಾಳಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ನಾರಾಯಣರೆಡ್ಡಿ, ಪ್ರೌಢಶಾಲೆ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ವೆಂಕಟರಾಮರೆಡ್ಡಿ, ಮುಖಂಡ ರವೀಂದ್ರಗೌಡ ಮತ್ತಿತರರು ಭಾಗವಹಿಸಿದ್ದರು.
ಕಸಾಪ ಕಾರ್ಯದರ್ಶಿ ನಿರೂಪಿಸಿದರು. ಅಶೋಕ್‌ಕುಮಾರ್ ಸ್ವಾಗತಿಸಿದರು. ಕೆ.ವಿ.ಚೌಡಪ್ಪ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.