ADVERTISEMENT

ನಾಳೆ ಜಿಲ್ಲೆಗೆ ಸಿಎಂ ಯಡಿಯೂರಪ್ಪ

ರಾಹುಲ ಬೆಳಗಲಿ
Published 19 ಫೆಬ್ರುವರಿ 2011, 9:20 IST
Last Updated 19 ಫೆಬ್ರುವರಿ 2011, 9:20 IST

ಚಿಕ್ಕಬಳ್ಳಾಪುರ: ರಾಜಕೀಯ ಏರುಪೇರಿನ ಬೆಳವಣಿಗೆ ಮತ್ತು ನಿತ್ಯದ ಕಾರ್ಯ ಒತ್ತಡದ ನಡುವೆ ಬಿಡುವು ಮಾಡಿಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಚಿಕ್ಕಬಳ್ಳಾಪುರಕ್ಕೆ ಬರುವ ನಿರೀಕ್ಷೆಯಿದೆ. ಭಾನುವಾರ ನಡೆಯಲಿರುವ ಆದಿಚುಂಚನಗಿರಿ ಮಠದ ವೀರಾಂಜನೇಯಸ್ವಾಮಿ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರು ನೀಡುವ ಭರವಸೆ ಮತ್ತು ಕೈಗೊಳ್ಳುವ ಕ್ರಮಗಳ ಬಗ್ಗೆ ಸಾರ್ವಜನಿಕರು ಕಾತರದಿಂದ ಎದುರು ನೋಡುತ್ತಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 31ರಂದು ನಂದಿ ರಂಗಮಂದಿರದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಯಡಿಯೂರಪ್ಪ, ‘ನನಗೆ 20 ವರ್ಷ ಅಲ್ಲ. ಎರಡೂವರೆ ವರ್ಷ ಕಾಲಾವಕಾಶ ಕೊಡಿ. ಚಿಕ್ಕಬಳ್ಳಾಪುರವನ್ನು ಸರ್ವ ಸೌಕರ್ಯಗಳ ನಗರವನ್ನಾಗಿ ಮಾಡುತ್ತೇನೆ. ಜಿಲ್ಲೆಯನ್ನು ಹಂತಹಂತವಾಗಿ ಅಭಿವೃದ್ಧಿಪಡಿಸ್ತೀನಿ. ನನ್ನ ಮಾತುಗಳ ಮೇಲೆ ನಂಬಿಕೆ ಇಡಿ. ನಿಮ್ಮ ಎಲ್ಲ ಬಯಕೆ ಮತ್ತು ಭರವಸೆ ಈಡೇರಿಸುತ್ತೇನೆ’ ಎಂದು ಹೇಳಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ, ಶಾಶ್ವತ ನೀರಾವರಿ ಹೋರಾಟ ಸಮಿತಿ, ರೈತ ಸಂಘಟನೆಗಳು, ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ನೀಡಿದ್ದ ಮನವಿಪತ್ರಗಳನ್ನು ಅಂದು ಸ್ವೀಕರಿಸಿದ್ದ ಅವರು ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ತಾಳ್ಮೆಯಿಂದ ಎಲ್ಲ ಸಂಘಟನೆಗಳ ಪ್ರತಿನಿಧಿಗಳ ಜೊತೆ ಮಾತನಾಡಿದ್ದ ಅವರು ಪ್ರತಿಯೊಬ್ಬರ ಸಮಸ್ಯೆ ಪರಿಹರಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದರು.

‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ ಎಂ.ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭ.  ವಿದ್ಯಾರ್ಥಿಗಳು ಎಂ.ಎ, ಎಂ.ಕಾಂ ಮುಂತಾದ ಉನ್ನತ ವ್ಯಾಸಂಗ ಮಾಡಬಹುದು. ವಿದ್ಯಾರ್ಥಿನಿಯರಿಗೆ ಮಹಿಳಾ ಕಾಲೇಜಿಗೆ ಶೀಘ್ರವೇ ನೂತನ ಕಟ್ಟಡ ನಿರ್ಮಾಣ’ ಎಂದು ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತನ್ನು ನೀಡಿದ್ದರು.‘ಜಿಲ್ಲೆಯಲ್ಲಿನ ಕನ್ನಡದ ಕೆಲಸಗಳು ಸುಗಮವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಕನ್ನಡ ಭವನ ನಿರ್ಮಾಣಕ್ಕೆ ನ್ಯಾಯಾಲಯಗಳ ನೂತನ ಕಟ್ಟಡ ಸಂಕೀರ್ಣ ನಿರ್ಮಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು.  ಭರವಸೆ ಈಡೇರಿಸುವಷ್ಟು ಹಣ ಸರ್ಕಾರದ ಖಜಾನೆಯಲ್ಲಿದೆ. ಯಾವುದರ ಬಗ್ಗೆಯೂ ಆತಂಕಪಡಬೇಕಿಲ್ಲ’ ಎಂದು ಹೇಳಿ ಸಾರ್ವಜನಿಕರಲ್ಲಿ ಆಶಾಭಾವನೆ ತುಂಬಿದ್ದರು.

ಇವುಗಳಷ್ಟೇ ಅಲ್ಲ, ಜಿಲ್ಲೆಯೂ ನೀರಿನ ಕೊರತೆ ಎದುರಿಸುತ್ತಿದ್ದು, ಇದರ ನಿವಾರಣೆಗಾಗಿ ನೀರಾವರಿ ತಜ್ಞ ಡಾ. ಪರಮಶಿವಯ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಪರಿಶೀಲಿಸಿಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು. ಕುಸಿದಿರುವ ಅಂತರ್ಜಲದ ಪ್ರಮಾಣ  ಹೆಚ್ಚಿಸುವ ಜೊತೆಗೆ ಜಿಲ್ಲೆಯಲ್ಲಿರುವ ಕೆರೆಗಳನ್ನು ಸಹ ಅಭಿವೃದ್ಧಿಪಡಿಸಲಾಗುವುದು. ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದರು. ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಹೋರಾಡುತ್ತಿರುವವರಲ್ಲಿ ಆಶಾಕಿರಣ ಮೂಡಿಸಿದ್ದರು.

ಭರವಸೆಗಳ ಪಟ್ಟಿ ನಂತರ ಇನ್ನೊಂದು ಮಾತು ಸಹ ಹೇಳಿದ್ದರು. ‘ಈ ಎಲ್ಲ ಭರವಸೆಗಳನ್ನು ಈಡೇರಿಕೆಗೆ   ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕು.ಮನೆಯ ಸದಸ್ಯರೆಲ್ಲರೂ ಬಿಜೆಪಿಯ ಕಾರ್ಯಕರ್ತರು ಎಂಬಂತೆ ಕಾರ್ಯನಿರ್ವಹಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು’ ಎಂದು ಮನವಿ ಮಾಡಿದ್ದರು. ಆದರೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಲಾಗಿಲ್ಲ. 

ಸಚಿವ ರಾದ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಸೇರಿದಂತೆ ಬಿಜೆಪಿ ಮುಖಂಡರು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡರೂ ಜನರು ಬಿಜೆಪಿಯತ್ತ ಒಲವು ತೋರಲಿಲ್ಲ.ಭಾನುವಾರ ಕಾರ್ಯಕ್ರಮಕ್ಕೆ ಆಗಮಿಸುವ ಸಿಎಂ  ಈ ಬಾರಿಯು ಭರವಸೆಗಳ ಮಹಾಪೂರವನ್ನೇ ಹರಿಸುವರೇ ಅಥವಾ ಅವುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವರೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಬಾರದ ಕಾರಣ ಮುನಿಸಿಕೊಳ್ಳುವರೇ ಅಥವಾ ಜಿಲ್ಲೆಯ ಅಭಿವೃದ್ಧಿಗೆ ಯೋಜನೆಗಳನ್ನು ಘೋಷಿಸುವರೇ ಎಂಬ ಕುತೂಹಲ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.