ADVERTISEMENT

ಪಂಚಾಯಿತಿ ಕಚೇರಿಗೆ ಬೀಗ ಹಾಕಿದ ದಂಪತಿ

ಮನೆ ನಿರ್ಮಾಣಕ್ಕೆ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡಲು ಮಿನಾಮೇಷ ಎಣಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 8:34 IST
Last Updated 29 ಮಾರ್ಚ್ 2018, 8:34 IST

ಗೌರಿಬಿದನೂರು: ಅಂಬೇಡ್ಕರ್ ವಸತಿ ಯೋಜನೆಯಡಿ ಮಂಜೂರಾದ ಮನೆ ನಿರ್ಮಾಣಕ್ಕೆ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡಲು ಮಿನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿ ತೊಂಡೇಬಾವಿ ಹೋಬಳಿಯ ಅಲೀಪುರದಲ್ಲಿ ಇತ್ತೀಚೆಗೆ ದಂಪತಿ ಗ್ರಾಮ ಪಂಚಾಯಿತಿಗೆ ಬೀಜ ಜಡಿದು ಮೌನ ಪ್ರತಿಭಟನೆ ನಡೆಸಿದರು.

ಅಲೀಪುರದ ನಾಯಕ ಸಮುದಾಯದ ಪುಷ್ಪಾ, ರಾಮು ಪ್ರತಿಭಟನೆಗೆ ಮುಂದಾದ ದಂಪತಿ. ಪುಷ್ಪಾ ಅವರ ಹೆಸರಿನಲ್ಲಿ ಮಂಜೂರಾದ ಮನೆಯ ಕಾಮಗಾರಿ ನಾಲ್ಕೈದು ತಿಂಗಳ ಹಿಂದೆ ಆರಂಭಗೊಂಡಿದ್ದು, ಸದ್ಯ ಪಾಯದ ಹಂತ ತಲುಪಿದೆ. ಹೀಗಾಗಿ ಈ ದಂಪತಿ ಅನುದಾನದ ಮೊದಲ ಕಂತು ಬಿಡುಗಡೆ ಮಾಡುವಂತೆ ಪಂಚಾಯಿತಿಗೆ ಬಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.

ಈ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಚಿಕ್ಕನರಸಿಂಹಯ್ಯ ಅವರು, ‘ನೀವು ಸರ್ಕಾರಿ ಶಾಲೆಗೆ ಸಂಬಂಧಪಟ್ಟ ಜಾಗದಲ್ಲಿ ಮನೆ ಕಟ್ಟುತ್ತಿರುವ ಕಾರಣಕ್ಕೆ ಅನುಧಾನ ಬಿಡುಗಡೆ ಮಾಡಲು ಸಾಧ್ಯವಿಲ್ಲ’ ಎಂದಿದ್ದರು ಎನ್ನಲಾಗಿದೆ. ಅಧಿಕಾರಿಗಳ ಉತ್ತರದಿಂದ ಕಂಗೆಟ್ಟ ದಂಪತಿ ಕಳೆದ ತಿಂಗಳು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವರ ಬಳಿ ಅಳಲು ತೋಡಿಕೊಂಡಿದ್ದರು.

ADVERTISEMENT

ಸಮಸ್ಯೆ ಬಗೆಹರಿಸಿ ಮನೆ ನಿರ್ಮಾಣಕ್ಕೆ ಅನುದಾನ ಕಲ್ಪಿಸಿಕೊಡುವಂತೆ ಶಾಸಕರು ಪತ್ರ ಬರೆದರೂ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸಿರಲಿಲ್ಲ ಎಂದು ದೂರುವ ದಂಪತಿ ಇತ್ತೀಚೆಗೆ ‘ನಮ್ಮ ಸಮಸ್ಯೆ ಪರಿಹರಿಸುವವರೆಗೂ ಕಚೇರಿಯ ಬಾಗಿಲು ತೆರೆಯಲು ಬಿಡುವುದಿಲ್ಲ’ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆಗೆ ಮುಂದಾದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒ ಅವರನ್ನು ಕರೆಯಿಸಿದ್ದಾರೆ. ಈ ವೇಳೆ ಏ.10ರ ಒಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ದೊರೆತ ಬಳಿಕ ಪುಷ್ಪಾ ದಂಪತಿ ಪ್ರತಿಭಟನೆ ಕೈಬಿಟ್ಟರು.

ಈ ವೇಳೆ ಮಾತನಾಡಿದ ಪುಷ್ಪಾ, ‘ಅನೇಕ ವರ್ಷಗಳಿಂದ ನಾವು ಸೂರಿಗಾಗಿ ಪರದಾಡುತ್ತಿದ್ದೇವೆ. ಇತ್ತೀಚೆಗೆ ಮನೆ ಮಂಜೂರಾಗುತ್ತಿದ್ದಂತೆ ಪಂಚಾಯಿತಿ ಅಧಿಕಾರಿಗಳು ₹ 30 ಸಾವಿರ ಪಡೆದುಕೊಂಡು ಪಾಯ ಹಾಕುವಂತೆ ತಿಳಿಸಿದ್ದರು. ಇದೀಗ ನಿವೇಶನ ನಿಮ್ಮದಲ್ಲ ಎನ್ನುತ್ತಿದ್ದಾರೆ’ ಎಂದು ಆರೋಪಿಸಿದರು.

ಈ ಕುರಿತು ಪಿಡಿಒ ಚಿಕ್ಕನರಸಿಂಹಯ್ಯ ಅವರನ್ನು ಕೇಳಿದರೆ, ‘ಪುಷ್ಪಾ ಅವರು ಶಾಲೆಗೆ ಸಂಬಂಧಿಸಿದ 6 ಅಡಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಪಾಯ ಹಾಕಿದ್ದಾರೆ. ಇದನ್ನು ಬಿಇಒ ಗಮನಕ್ಕೂ ತರಲಾಗಿದೆ. ಕೂಡಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.