ADVERTISEMENT

ಪಿನಾಕಿನಿ ಹೋರಾಟಕ್ಕೆ ನೂರಾರು ತೆರೆಗಳು..

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 10:05 IST
Last Updated 11 ಜನವರಿ 2012, 10:05 IST

ಗೌರಿಬಿದನೂರು: ಚಿಕ್ಕಬಳ್ಳಾಪುರ ಸಮೀಪದ ನಂದಿ ಗಿರಿಧಾಮದ ತಳದಲ್ಲಿ ಹುಟ್ಟಿ, ಗೌರಿಬಿದನೂರು ಮೂಲಕ ಹಾರಿದು ಆಂಧ್ರಪ್ರದೇಶಕ್ಕೆ ಸೇರುತ್ತಿದ್ದ ನದಿಯು ಒಂದು ಕಾಲದಲ್ಲಿ ವರ್ಷಪೂರ್ತಿ ಹರಿಯುತಿತ್ತು. ಹದಿಯುವ ನದಿಯಿಂದ ಕೃಷಿ ಚಟುವಟಿಕೆಗೆ ಅಷ್ಟೇ ಅಲ್ಲ, ಪ್ರಾಣಿಪಕ್ಷಿಗಳಿಗೆ ಮತ್ತು ಜಾನುವಾರುಗಳಿಗೆ ನೀರು ಸಿಗುತಿತ್ತು. ಸುತ್ತಮುತ್ತಲಿನ ಪ್ರದೇಶಕ್ಕೆ ಪಿನಾಕಿನಿ ನದಿಯು ಜೀವಸೆಲೆಯಾಗಿತ್ತು. ಪಿನಾಕಿರಿ ನದಿ ಹರಿಯುವುದು ಎಷ್ಟೋ ಜನರಿಗೆ ಜೀವನಾಧಾರವೂ ಆಗಿತ್ತು.

ಆದರೆ ವರ್ಷಗಳು ಕಳೆದಂತೆ ಮರಳು ಗಣಿಗಾರಿಕೆ ತನ್ನ ವ್ಯಾಪ್ತಿಯು ವಿಸ್ತರಿಸಿದಂತೆ ಮತ್ತು ಇನ್ನಿತರ ಕಾರಣಗಳಿಂದ ನದಿಯು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲು ಆರಂಭಿಸಿತು. ಸುಲಭವಾಗಿ ದೊರೆಯುವ ಮರಳಿನ ಸಾಗಾಣಿಕೆಯಿಂದ ನಿಸರ್ಗದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂಬ ಮಾತುಗಳು ಕೇಳಿ ಬಂದಾಗ, ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಹಲವು ರೀತಿಯ ಕಡಿವಾಣ ಹಾಕಿದರೂ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಮೇಲೆ ನಿಯಂತ್ರಣ ಸಾಧಿಸಲಾಗಲಿಲ್ಲ ಎಂಬ ಆರೋಪ ಆಗಾಗ್ಗೆ ಕೇಳಿ ಬರುತ್ತದೆ.

`ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳು, ಸರ್ಕಾರದ ನಿವೃತ್ತ ಅಧಿಕಾರಿಗಳು, ರಾಜಕಾರಣಿಗಳು ಮುಂತಾದವರು ಶಾಮೀಲಾಗಿದ್ದಾರೆ. ಮರಳು ಗಣಿಗಾರಿಕೆಯನ್ನು ನಿಷೇಧಿಸಲು ಕ್ರಮ ಕೈಗೊಂಡರೆ, ಮರಳು ದಂಧೆಯಲ್ಲಿ ತೊಡಗಿದವರು ಕೂಲಿಕಾರ್ಮಿಕರನ್ನು ಪ್ರಚೋದಿಸುತ್ತಾರೆ. ನಮಗೆ ಕೆಲಸವಿಲ್ಲ, ಮರಳು ಗಣಿಗಾರಿಕೆಗೆ ಅವಕಾಶ ಮಾಡಿಕೊಡಿ ಎಂದು ಕೂಲಿಕಾರ್ಮಿಕರಿಂದಲೇ ಒತ್ತಡ ಹೇರಿಸುತ್ತಾರೆ. ಪರಿಸರದ ಕಾಳಜಿಗಿಂತ ಹಣ ಮಾಡುವ ದುರಾಸೆ ಹೆಚ್ಚಾದಾಗ, ಸಹಜವಾಗಿಯೇ ಎಲ್ಲವೂ ಬುಡಮೇಲಾಗುತ್ತದೆ~ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡ ಲೋಕೇಶ್‌ಗೌಡ `ಪ್ರಜಾವಾಣಿ~ಗೆ ತಿಳಿಸಿದರು.

`ತಾಲ್ಲೂಕಿನಲ್ಲಿ ಹಳೆಯ ಕಾಲದ ಆರು ಸಾವಿರ ತೆರೆದ ಬಾವಿಗಳಲ್ಲಿ ಶೇ 90ರಷ್ಟು ನಿರುಪಯುಕ್ತವಾಗಿವೆ. ಎರಡು ದಶಕಗಳಲ್ಲಿ ನಿರ್ಮಿಸಲಾದ 1200 ಕೊಳವೆ ಬಾವಿಗಳಲ್ಲಿ ಶೇ 80ಷ್ಟು ಬತ್ತಿ ಹೋಗಿವೆ. ಇತ್ತೀಚಿನ ದಿನಗಳಲ್ಲಿ ಸಾವಿರ ಅಡಿಗಳಷ್ಟು ಆಳವಾಗಿ ಕೊಳವೆಬಾವಿಗಳನ್ನು ಕೊರೆ ದರೂ ಒಂದು ಹನಿ ನೀರು ಸಿಗುವುದಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ನದಿಯು ಸಂಪೂರ್ಣವಾಗಿ ಕಣ್ಮರೆಯಾದರೆ, ಈ ಭಾಗದ ಜೀವಸೆಲೆಯನ್ನು ಕಳೆದುಕೊಳ್ಳುತ್ತೇವೆ~ ಎಂದು ಅವರು ತಿಳಿಸಿದರು.

`ಉತ್ತರ ಪಿನಾಕಿನಿ ರಕ್ಷಿಸಿ ಎಂದು ಒತ್ತಾಯಿಸಿ ಹಲವು ಬಾರಿ ಹೋರಾಟ ನಡೆಸಿದ್ದೇವೆ. ಮನವಿಪತ್ರಗಳನ್ನೂ ಸಲ್ಲಿಸಿದ್ದೇವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೂರು ದಿನಗಳ ಕಾಲ ಪಾದಯಾತ್ರೆ ಕೈಗೊಂಡು ನದಿಯ ರಕ್ಷಣೆ ಅಗತ್ಯವಾಗಿದೆ ಎಂದು ಮನದಟ್ಟು ಮಾಡಲು ಪ್ರಯತ್ನಿಸಿದೆವು. ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಿಂದ ಮತ್ತು ಚಿಕ್ಕಬಳ್ಳಾ ಪುರ ತಾಲ್ಲೂಕಿನ ಶ್ರೀನಿವಾಸಸಾಗರ ಕೆರೆಯವರೆಗೆ ಮೂರು ದಿನಗಳ ಕಾಲ ನಡೆಸಿದ ಪಾದಯಾತ್ರೆಗೆ ವಿವಿಧ ಸಂಘಸಂಸ್ಥೆಗಳಿಂದ ಉತ್ತಮ ರೀತಿಯ ಪ್ರತಿಕ್ರಿಯೆ ವ್ಯಕ್ತವಾಯಿತು~ ಎಂದು ರಾಜ್ಯ ರೈತ ಸಂಘದ ಮುಖಂಡ ಲಕ್ಷ್ಮಿನಾರಾಯಣ ಹೇಳಿದರು.

`ನದಿ ರಕ್ಷಣೆಯ ಮಹತ್ವವನ್ನು ಎಲ್ಲೆಡೆ ಸಾರಬೇಕು, ನದಿಯುದ್ದಕ್ಕೂ ಅಲ್ಲಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಬೇಕು, ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ನದಿಯ ರಕ್ಷಣೆಗಾಗಿ ಸರ್ಕಾರದ ಮೇಲೆ ಸತತ ಒತ್ತಡ ಹೇರಬೇಕು~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.