ADVERTISEMENT

ಬಿಜೆಪಿ–ಜೆಡಿಎಸ್ ಮೈತ್ರಿಯ ಪ್ರಶ್ನೆಯೇ ಇಲ್ಲ

ಮುಸ್ಲಿಮರ ಮತ ಸೆಳೆಯಲು ಆಜಾದ್ ಕುತಂತ್ರ: ದೇವೇಗೌಡ ಅವರ ಆರೋಪ

​ಪ್ರಜಾವಾಣಿ ವಾರ್ತೆ
Published 9 ಮೇ 2018, 9:20 IST
Last Updated 9 ಮೇ 2018, 9:20 IST

ಶಿಡ್ಲಘಟ್ಟ: ‘ರವಿ ಅ‌ವರಂತಹ ಯೋಗ್ಯ ಹುಡುಗನನ್ನು ನಿಮ್ಮ ಕ್ಷೇತ್ರಕ್ಕೆ ಕೊಟ್ಟಿದ್ದೇನೆ. ಇವನು ನಿಮ್ಮ ಮಗ. ನೀವೇ ಮುಂದೆ ನಿಂತು ರವಿಯನ್ನು ಗೆಲ್ಲಿಸಬೇಕು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದರು.

ನಗರದ ದಿಬ್ಬೂರಹಳ್ಳಿ ರಸ್ತೆಯ ಬಾಷುಸಾಬ್‌ ದರ್ಗಾ ಬಳಿ ಮಂಗಳವಾರ ನಡೆದ ಜೆಡಿಎಸ್‌ ಸಮಾವೇಶದಲ್ಲಿ  ಮಾತನಾಡಿದರು.

ಈ ಸಮಾವೇಶದಲ್ಲಿ ಇಷ್ಟೊಂದು ಜನರನ್ನು ನೋಡಿ ಸಂತೋಷವಾಗುತ್ತಿದೆ. ಎದುರಾಳಿಗಳು ಠೇವಣಿ ಕಳೆದುಕೊಳ್ಳುವಂತೆ ರವಿಯನ್ನು ಬೆಂಬಲಿಸಿ ಎಂದು ಹೇಳಿದರು.

ADVERTISEMENT

‘ನನ್ನ ಜೀವಮಾನದಲ್ಲಿ ಯಾರಿಗೂ ಮೋಸ ಮಾಡಿಲ್ಲ. ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು ಮುಸ್ಲಿಂ ಸಮುದಾಯದ ಮತಗಳನ್ನು ಗಳಿಸಲು ಕುತಂತ್ರ ರೂಪಿಸಿದ್ದಾರೆ. ಇತ್ತೀಚೆಗೆ ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತೆ ಎಂದು ತಿಳಿಸಿದ್ದಾರೆ. ಅದು ಸುಳ್ಳು. ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು.

ರೈತಪರ ಚಿಂತನೆ, ಶಾಶ್ವತ ನೀರಾವರಿಗಾಗಿ ನಮ್ಮ ಪಕ್ಷದ ತುಡಿತವಿದೆ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದಂತೆ ಬಯಲುಸೀಮೆಗೆ ನೀರಿನ ಬವಣೆಯ ಬಗ್ಗೆ ಸ್ಪಷ್ಟವಾದ ಅರಿವಿದೆ. ಶಾಶ್ವತ ನೀರು ತರುವುದೇ ನಮ್ಮ ಮೊದಲ ಆದ್ಯತೆ. ಲಿಂಗಾಯತರ ನಡುವೆ ಬಿರುಕು ತಂದ ಸಿದ್ದರಾಮಯ್ಯನ ಕಾಂಗ್ರೆಸ್‌ ಹಾಗೂ ಒಳಜಗಳದ ಬಿಜೆಪಿಯಲ್ಲಿ ಹಲವಾರು ಗೊಂದಲಗಳಿವೆ ಎಂದರು

ಜೆಡಿಎಸ್‌ ಅಭ್ಯರ್ಥಿ ಬಿ.ಎನ್‌.ರವಿಕುಮಾರ್‌ ಮಾತನಾಡಿ, ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿ, ದ್ರಾಕ್ಷಿ ಬೆಳೆಗಾರರಿಗೆ ಅನುಕೂಲವಾಗುವ ವೈನ್‌ ಯಾರ್ಡ್‌ ಸ್ಥಾಪನೆ, ರೇಷ್ಮೆಯ ವಿವಿಧ ಉತ್ಪನ್ನಗಳ ತಯಾರಿಕಾ ಕಾರ್ಖಾನೆ, ಹೈನೋದ್ಯಮ ಬಲವರ್ಧನೆ ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್‌ ಮುನಿಯಪ್ಪ, ತನುಜಾ ರಘು, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿ.ವಿ.ನಾಗರಾಜ್‌, ರಾಧಾಕೃಷ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಬಿ.ವೆಂಕಟೇಶ್‌, ನಂದನವನಂ ಶ್ರೀರಾಮರೆಡ್ಡಿ, ಹುಜಗೂರು ರಾಮಣ್ಣ, ಕದಿರಿ ಯೂಸುಫ್‌, ಆದಿಲ್‌ಪಾಷಾ, ಜೆಡಿಎಸ್‌ ವಕ್ತಾರ ಶ್ರೀನಿವಾಸ್‌, ಪಾಪಿರೆಡ್ಡಿ, ಯೋಗಾನಂದ್‌, ನಗರಸಭಾ ಸದಸ್ಯರು ಹಾಜರಿದ್ದರು.

ರಾಜಣ್ಣ ಹೆಸರು ಹೇಳದೆ ಟೀಕೆ

ಶಾಸಕ ಎಂ.ರಾಜಣ್ಣ ಅವರ ಹೆಸರು ಹೇಳದೆ ಅವರ ಬಗ್ಗೆ ಮಾತನಾಡಿದ ದೇವೇಗೌಡರು, ‘ನಮ್ಮಲ್ಲೇ ಇದ್ದವರೂ ಈಗ ಚದುರಂಗದ ಆಟ ಆಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡಲು ನಾನು ಇಷ್ಟಪಡುವುದಿಲ್ಲ. ಆ ನಾಲಾಯಕ್‌, ಅಯೋಗ್ಯನ ಹೆಸರು ಹೇಳಲು ಸಹ ನನಗೆ ಇಷ್ಟವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.