ADVERTISEMENT

ಬ್ರಿಟಿಷ್‌ ಬಂಗಲೆ ಇನ್ನು ನೆನಪು ಮಾತ್ರ

ಐತಿಹಾಸಿಕ ಸ್ಮಾರಕ ನೆಲಸಮ

ರಾಹುಲ ಬೆಳಗಲಿ
Published 17 ಫೆಬ್ರುವರಿ 2014, 9:32 IST
Last Updated 17 ಫೆಬ್ರುವರಿ 2014, 9:32 IST
ಚಿಕ್ಕಬಳ್ಳಾಪುರದ ಹೃದಯಭಾಗದಲ್ಲಿದ್ದ ಬ್ರಿಟಿಷರ ಕಾಲದ ಬಂಗಲೆ.
ಚಿಕ್ಕಬಳ್ಳಾಪುರದ ಹೃದಯಭಾಗದಲ್ಲಿದ್ದ ಬ್ರಿಟಿಷರ ಕಾಲದ ಬಂಗಲೆ.   

ಚಿಕ್ಕಬಳ್ಳಾಪುರ: ನಗರದ ಪ್ರಮುಖ ಐತಿಹಾಸಿಕ ಸ್ಮಾರಕದಂತಿದ್ದ ಬ್ರಿಟಿಷರ ಕಾಲದ ಅಪರೂಪ ವಿನ್ಯಾಸದ ಬಂಗಲೆ ಕೊನೆಗೂ ತನ್ನ ಅಸ್ತಿತ್ವ ಕಳೆದು­ಕೊಂಡಿದೆ. ಒಂದಾನೊಂದು ಕಾಲದಲ್ಲಿ ಉಪವಿಭಾಗಾಧಿಕಾರಿ ನಿವಾಸವಾಗಿದ್ದ ಬಂಗಲೆ ಇದ್ದ ಜಾಗದಲ್ಲಿಯೇ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ವಸತಿ ಗೃಹ ನಿರ್ಮಾಣವಾಗಿದೆ.

ಪಕ್ಕದಲ್ಲಿಯೇ ಜಿಲ್ಲಾಧಿಕಾರಿ ಹಾಲಿ ನಿವಾಸ, ಎದುರಿನ ಸಾಲಿನಲ್ಲಿ ನ್ಯಾಯಾಧೀಶರು, ವಕೀಲರು ಮತ್ತು ಅಧಿಕಾರಿಗಳ ಮನೆಗಳ ಎದುರಿದ್ದ ಈ ಬಂಗಲೆಯನ್ನು ದೂರದಿಂದ ನೋಡಿದರೆ, ಪಾಳುಬಿದ್ದ ಅರಮನೆ­ಯಂತೆ ಕಾಣಿಸುತ್ತಿತ್ತು. ಶಿಥಿಲಗೊಂಡ ಮನೆಬಾಗಿಲು, ಕಿಟಕಿಗಳ ಹೊರತಾಗಿಯೂ ಕಟ್ಟಡ ತನ್ನ ಉಪಸ್ಥಿತಿಯನ್ನು ಸಾರಿ ಹೇಳಲು ಪ್ರಯತ್ನಿಸುತ್ತಿದೆ ಎಂಬಂತೆ ಭಾಸವಾಗುತ್ತಿತ್ತು.

ಸ್ಮಾರಕವಾಗಬೇಕಿತ್ತು: ಬಂಗಲೆ ಆವರಣದ ಸುತ್ತಮುತ್ತಲೂ ಆವರಿಸಿ­ಕೊಂಡಿ­ರುವ ಹೆಮ್ಮರಗಳ ಮಧ್ಯೆಯೇ ಮಕ್ಕಳು ಆಟವಾಡುತ್ತಿದ್ದರು. ಬಂಗಲೆ­ಯಲ್ಲಿ ಯಾರೂ ವಾಸವಿಲ್ಲದ ಕಾರಣ ಪಾಳು ಬಿದ್ದಿದೆ. ಅದರಲ್ಲಿ ಏನೂ ದೋಷವಿಲ್ಲ ಎಂದು ಸುತ್ತಮುತ್ತಲ ನಿವಾಸಿಗಳು ಹೇಳುತ್ತಿದ್ದರು. ಬಂಗಲೆಯನ್ನು ಸ್ಮಾರಕವನ್ನಾಗಿಸಬೇಕು ಎಂಬ ಅಭಿಪ್ರಾಯವೂ ಹಲವರಿಂದ ವ್ಯಕ್ತವಾಗಿತ್ತು.

ಈ ಬಂಗಲೆಯನ್ನು ಯಾರು, ಯಾವಾಗ ಮತ್ತು ಎಷ್ಟನೇ ಇಸ್ವಿಯಲ್ಲಿ ಕಟ್ಟಿದರು ಎಂಬುದಕ್ಕೆ ನಿಖರ ಮಾಹಿತಿ ಲಭ್ಯವಿಲ್ಲ. ಆದರೆ ಕಟ್ಟಿದವರು ಪ್ರಕೃತಿ ಮತ್ತು ವಿನ್ಯಾಸದ ಮೇಲೆ ಅಪಾರ ಪ್ರೀತಿ ಹೊಂದಿದ್ದರು ಎಂಬುದನ್ನು ಮಾತ್ರ ಅದರ ವಿನ್ಯಾಸವೇ ಸಾರಿ ಹೇಳುತ್ತದೆ. ಎರಡು ಎಕರೆ ವಿಸ್ತೀರ್ಣದ ನಿವೇಶನದ ಮಧ್ಯಭಾಗದಲ್ಲಿ ಬಂಗಲೆ ಇದೆ. ಸುತ್ತಲಿದ್ದ ಯಾವುದೇ ಮರವನ್ನು ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಕಡಿದಿಲ್ಲ.

ವಸತಿ ಗೃಹ: ಒಟ್ಟು ₨ 4.72 ಕೋಟಿ ಮೊತ್ತದಲ್ಲಿ ಜಿಲ್ಲಾಧಿಕಾರಿ, ಉಪ­ವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತು ಜಿಲ್ಲಾಡಳಿತದ ಅಧಿಕಾರ ವರ್ಗದವರಿಗೆ ಪ್ರತ್ಯೇಕ ವಸತಿಗೃಹಗಳು ನಿರ್ಮಾಣವಾಗಲಿದೆ. ಜಿಲ್ಲಾಧಿಕಾರಿ ವಸತಿ ಗೃಹ ನಿರ್ಮಾಣಕ್ಕೆಂದೇ ₨ 1.7 ಕೋಟಿ ಮೀಸಲಿಡಲಾಗಿದೆ.

‘ಇಡೀ ರಾಜ್ಯದಲ್ಲಿ ನನ್ನನ್ನು ಹೊರತು­ಪಡಿಸಿ ಎಲ್ಲಾ ಜಿಲ್ಲಾಧಿ­-ಕಾರಿಗಳಿಗೆ ಜಿಲ್ಲಾ ಕೇಂದ್ರದಲ್ಲಿ ಪ್ರತ್ಯೇಕ ವಸತಿಗೃಹವಿದೆ. ಜಿಲ್ಲೆಯಾಗಿ 6 ವರ್ಷವಾದರೂ ಜಿಲ್ಲಾಧಿಕಾರಿಗೆಂದೇ ಪ್ರತ್ಯೇಕ ವಸತಿಗೃಹವಿಲ್ಲ. ನಾನು ಈಗ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿನ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಮೀಸಲಾಗಿರುವ ವಸತಿಗೃಹದಲ್ಲಿ ಇದ್ದೇನೆ. ಪ್ರತ್ಯೇಕ ವಸತಿಗೃಹ ಅನಿವಾರ್ಯವಾಗಿರುವ ಕಾರಣ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡೆ’ ಎಂದು ಜಿಲ್ಲಾಧಿಕಾರಿ ಡಾ.ಆರ್‌.ವಿಶಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾಧಿಕಾರಿ ವಸತಿಗೃಹದ ಜೊತೆಗೆ ಉದ್ಯಾನ ಮತ್ತು ಇತರ ಸೌಕರ್ಯ ಅಭಿವೃದ್ಧಿಪಡಿಸ­ಲಾಗುವುದು. ಕಾಂಪೌಂಡ್‌ ನಿರ್ಮಿಸಿ, ಆವರಣಕ್ಕೆ ವಿಶೇಷ ಮೆರುಗು ನೀಡಲಾಗುವುದು. ನಿರ್ಮಾಣ ಕಾರ್ಯಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಸರ್ಕಾರದ ಅನುಮತಿ ಕೋರಲಾಗಿದೆ. ಒಂಬತ್ತು ತಿಂಗಳೊಳಗೆ ನಿರ್ಮಾಣ ಪೂರ್ಣಗೊಳ್ಳುವ ವಿಶ್ವಾಸವಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.