ADVERTISEMENT

ಮಕ್ಕಳ ಕಲಿಕೆಗೆ ಶಾಲೆಗಿಂತ ಛಲ ಮುಖ್ಯ

‘ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ’ ಯೋಜನೆಯಡಿ ನಿರ್ಮಿಸಿದ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 7:30 IST
Last Updated 14 ಮಾರ್ಚ್ 2018, 7:30 IST
ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ.ಸುಧಾಕರ್‌ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ.ಸುಧಾಕರ್‌ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಹೆಚ್ಚು ವಿದ್ಯಾಭ್ಯಾಸದ ಕಡೆಗೆ ಒತ್ತು ನೀಡಿದರೆ ಭವಿಷ್ಯದಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳಲು ಸಾಧ್ಯ’ ಎಂದು ಶಾಸಕ ಡಾ.ಕೆ.ಸುಧಾಕರ್‌ ತಿಳಿಸಿದರು.

ತಾಲ್ಲೂಕಿನ ಮಂಡಿಕಲ್ ಹೋಬಳಿ ಅಡ್ಡಗಲ್ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ‘ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ’ ಯೋಜನೆಯಡಿ ನಿರ್ಮಿಸಿದ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

‘ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ಆಸೆಯಿಂದ ಇತ್ತೀಚಿನ ದಿನಗಳಲ್ಲಿ ಪೋಷಕರು ಅತ್ತ ಹೆಚ್ಚು ಒಲುವು ತೋರುತ್ತಿದ್ದಾರೆ. ಆದರೆ ಖಾಸಗಿ ಶಾಲೆಗಳಲ್ಲಿ ಕೂಡ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆಯಲು ಸಾಧ್ಯವಿಲ್ಲ. ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಖಾಸಗಿ ಶಾಲೆಗಳಿಗೆ ಸೇರಿಸುವ ಅವಶ್ಯ ಕತೆ ಇಲ್ಲ. ಕಲಿಯುವ ಛಲ ಇದ್ದವರು ಯಾವ ಶಾಲೆಗೆ ಸೇರಿಸಿದರೂ ಕಲಿಯುತ್ತಾರೆ. ವಿದ್ಯಾರ್ಥಿಗಳು ಜ್ಞಾನ ಸಂಪಾದಿಸಿಕೊಳ್ಳಲು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು’ ಎಂದರು.

ADVERTISEMENT

‘ಜಿಲ್ಲೆಯವರೇ ಆದ ಸರ್.ಎಂ. ವಿಶ್ವೇಶ್ವರಯ್ಯ, ಪ್ರೊ. ಸಿ.ಎನ್.ಆರ್. ರಾವ್ ಸೇರಿದಂತೆ ಅನೇಕರು ಬಡತನ, ಕಷ್ಟಗಳ ನಡುವೆಯೇ ಕಲಿತು ವಿಶ್ವ ಖ್ಯಾತಿ ಗಳಿಸಿದ್ದಾರೆ. ಶಿಕ್ಷಣ ವಿದ್ಯಾರ್ಥಿಗಳ ಆಸ್ತಿ, ಶಕ್ತಿ ಇದ್ದಂತೆ. ಸಮಾಜದಲ್ಲಿ ಗೌರವ ಸಂಪಾದಿಸಿ ಕೊಳ್ಳಲು ಏಕಾಗ್ರತೆ, ಪರಿ ಶ್ರಮದಿಂದ ಕಲಿಯಬೇಕು’ ಎಂದರು.

‘ತಾಲ್ಲೂಕಿನಲ್ಲಿ ಪೆರೇಸಂದ್ರ, ಅಡ್ಡಗಲ್, ಮಂಡಿಕಲ್ ಹಾಗೂ ಮುದ್ದೇನಹಳ್ಳಿ ಪ್ರೌಢಶಾಲೆಗಳ ಅಭಿವೃದ್ಧಿ ಕೈಗೊಳ್ಳಲು, ನೂತನ ಕೊಠಡಿಗಳಿಗೆ ಬೇಕಾದ ಅಗತ್ಯ ಪರಿಕರಗಳಿಗಾಗಿ ಸುಮಾರು ₹ 2.50 ಕೋಟಿ ಒದಗಿಸಲಾಗುತ್ತಿದೆ. ಕ್ಷೇತ್ರದಲ್ಲಿ ಅಭಿವೃದ್ಧಿಯಿಂದ ವಂಚಿತಗೊಂಡಿದ್ದ ಗ್ರಾಮಗಳನ್ನು ಅಭಿವೃದ್ಧಿಗೊಳಿಸ ಬೇಕೆಂಬ ಬದ್ಧತೆ ಯಿಂದ ಕಳೆದ ನಾಲ್ಕೂವರೆ ವರ್ಷಗಳಿಂದ ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿ ದ್ದೇನೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಎಪಿಎಂಸಿ ಅಧ್ಯಕ್ಷ ಗೋವಿಂದಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಂ.ಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ರೀರಾಮರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಣ್ಣರೆಡ್ಡಿ, ಬಿಇಒ ಶಾಂತಲಾ, ಅಡ್ಡಗಲ್‌ ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಕೃಷ್ಣಾರೆಡ್ಡಿ, ಸದಸ್ಯರಾದ ರಾಮಸ್ವಾಮಿ, ಫಯಾಜ್‌ ಮುಖಂಡರಾದ ವೆಂಕಟೇಶ್, ಕುಪ್ಪೇಂದ್ರ ಉಪಸ್ಥಿತರಿದ್ದರು.

ಶಿಕ್ಷಣಕ್ಕೆ ₹ 24 ಸಾವಿರ ಕೋಟಿ
ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ₹ 24 ಸಾವಿರ ಕೋಟಿ ಮೀಸಲಿಟ್ಟಿದೆ. ಸುಮಾರು ₹ 19 ಕೋಟಿ ಪ್ರಾಧ್ಯಾಪಕರ ಸಂಬಳಕ್ಕೆ ನಿಗದಿಪಡಿಸಿ ಉಳಿದ ಮೊತ್ತವನ್ನು ಶಾಲೆಗಳ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ. ಇವತ್ತು ಸರ್ಕಾರ ಅನೇಕ ಯೋಜನೆಗಳೊಂದಿಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು.

‘ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸಲವತ್ತುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವ ಮೂಲಕ ಮುಂದಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

*
ವಿರೋಧ ಪಕ್ಷದವರು ಕಣ್ಣಿದ್ದು ಕುರುಡರಂತಾಗಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎನ್ನುತ್ತಾರೆ. ಅವರಿಗೆ ಗ್ರಾಮಸ್ಥರಿಗೆ ಉತ್ತರಿಸಬೇಕು.
–ಡಾ.ಕೆ.ಸುಧಾಕರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.