ADVERTISEMENT

ಮಳೆಗಾಗಿ ಚೌಡೇಶ್ವರಿ ದೇವಿಗೆ ಅದ್ಧೂರಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 11:45 IST
Last Updated 20 ಜುಲೈ 2012, 11:45 IST

ಬಾಗೇಪಲ್ಲಿ: ತಾಲ್ಲೂಕಿನ ಪೋತೇಪಲ್ಲಿ ಗ್ರಾಮದಲ್ಲಿ ಬುಧವಾರ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದೇವತೆ ಚೌಡೇಶ್ವರಿ ದೇವಿ ಸೇರಿದಂತೆ ಗ್ರಾಮದ ಎಲ್ಲ ದೇವರಿಗೆ ಪೂಜೆ ನಡೆಯಿತು. ಮುನಿಸಿಕೊಂಡಿರುವ ಮಳೆರಾಯನ ಮನವೊಲಿಕೆಗಾಗಿ ಎಲ್ಲ ದೇವರಿಗೆ ಅಲಂಕಾರ, ತಂಬಿಟ್ಟಿನ ದೀಪದ ಆರತಿ ಮೆರವಣಿಗೆ ಅದ್ಧೂರಿಯಿಂದ ಜರುಗಿತು.

ಗ್ರಾಮ ದೇವತೆ ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕೈಂಕಾರ್ಯಗಳಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ನಂತರ ಗ್ರಾಮದ ಆಂಜನೇಯಸ್ವಾಮಿ, ಸಪ್ಪಲಮ್ಮ, ಗೊಡ್ಡಮ್ಮ, ಚೌಡೇಶ್ವರಿ, ಗಂಗಮ್ಮದೇವಿ, ಸಲ್ಲಾಪುರಮ್ಮ, ಮೊತ್ತತ್ತರಾಯನಗುಡಿ ದೇವರಿಗೆ ಮಹಿಳೆಯರು ತಂಬಿಟ್ಟು, ದೀಪದ ಆರತಿ ಬೆಳಗಿದರು.

ಶಕ್ತಿ ದೇವಿ ಹೆಸರಿನಲ್ಲಿ ಕುರಿ, ಕೋಳಿಗಳನ್ನು ಬಲಿ ಕೊಡಲಾಯಿತು. ತಮಟೆಗಳ ಶಬ್ದಕ್ಕೆ ಗ್ರಾಮದ ಯುವಕರು ಹೆಜ್ಜೆ ಹಾಕುತ್ತಾ ಸಂಭ್ರಮ ಪಟ್ಟರು.

ತಾಲ್ಲೂಕಿನ ಪೋತೇಪಲ್ಲಿ, ರಾಯ  ದುರ್ಗಂಪಲ್ಲಿ, ನಲ್ಲಪರೆಡ್ಡಿಪಲ್ಲಿ ಹಾಗೂ ಪಾತಬಾಗೇಪಲ್ಲಿ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ ಭಕ್ತರು ತಮ್ಮ ಮನದ ಹರಕೆ ತಿರಿಸಿದರು.  ಕಳೆದ 10 ವರ್ಷಗಳ ಹಿಂದೆ ಗ್ರಾಮದ ಮುಖಂಡರು ರಾಜಕೀಯ ಪ್ರಭಾವದಿಂದ ಎರಡು ಗುಂಪುಗಳಾಗಿದ್ದರು. ಅದರಿಂದ ಊರು ಜಾತ್ರೆ ನಡೆದಿರಲಿಲ್ಲ. ಇದೀಗ ಗ್ರಾಮದ ಹಿರಿಯರು ಹಾಗೂ ಯುವಕರು ಸೇರಿಕೊಂಡು ಗ್ರಾಮ ದೇವತೆ ಚೌಡೇಶ್ವರಿ ದೇವಿ ಮಳೆ-ಬೆಳೆಗಳಿಗೆ ಊರ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪೂಜಾರಿ ಚೌಡಪ್ಪ `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.