ADVERTISEMENT

ಮಾಹಿತಿ ಇಲ್ಲದಿದ್ದರೆ ಮನೆಗೆ ಹೋಗ್ರಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2011, 8:50 IST
Last Updated 31 ಆಗಸ್ಟ್ 2011, 8:50 IST
ಮಾಹಿತಿ ಇಲ್ಲದಿದ್ದರೆ ಮನೆಗೆ ಹೋಗ್ರಿ
ಮಾಹಿತಿ ಇಲ್ಲದಿದ್ದರೆ ಮನೆಗೆ ಹೋಗ್ರಿ   

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿಗೆ ಆಯ್ಕೆಗೊಂಡು ಎಂಟು ತಿಂಗಳವರೆಗೆ ಮೌನವಹಿಸಿದ್ದ ಮತ್ತು ಮೆದು ಧ್ವನಿ ಯಲ್ಲಿ ಮಾತನಾಡುತ್ತಿದ್ದ ಜಿಲ್ಲಾ ಪಂಚಾ ಯಿತಿ ಅಧ್ಯಕ್ಷ, ಉಪಾಧ್ಯಕ್ಷೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ದಿಢೀರ್‌ನೇ ಜಿಲ್ಲಾ ಮಟ್ಟದ ಅಧಿಕಾರಿ ಗಳಿಗೆ ತರಾಟೆ ತೆಗೆದುಕೊಂಡ ಘಟನೆ ಮಂಗಳವಾರ ನಡೆಯಿತು.

`ನಿಮಗೆ ವೇತನ ನೀಡುವುದೇ ದಂಡ. ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಾಗದಿದ್ದರೆ, ರಾಜೀನಾಮೆ ಕೊಟ್ಟು ಮನೆಗೆ ಹೋಗಿ~ ಎಂದು ಆಕ್ರೋಶದಿಂದ ಮಾತನಾಡಿದ ಅವರು ಅಧಿಕಾರಿಗಳನ್ನು ಬೆವರಿಳಿಸಿದರು. ಪ್ರಶ್ನೆಗಳಿಗೆ ಉತ್ತರಿಸಲಾಗದೇ ಅಧಿಕಾರಿಗಳು ದೀರ್ಘಕಾಲದವರೆಗೆ ಸುಮ್ಮನೆ ನಿಂತುಕೊಂಡ ಪ್ರಸಂಗವೂ ಜರುಗಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಬಹುತೇಕ ಸಮಯವೂ ಅಧಿಕಾರಿಗಳ ತರಾಟೆಗೆ ಮೀಸಲಾಗಿತ್ತು. ಯೋಜನೆ, ಅನುದಾನ, ಕಾಮಗಾರಿ, ಕೊರತೆ ಮುಂತಾದವುಗಳ ಕುರಿತು ಒಂದರ ಮೇಲೊಂದರಂತೆ ಕೇಳಲಾಗುತ್ತಿದ್ದ ಪ್ರಶ್ನೆಗಳಿಗೆ ತಡಬಡಾಯಿಸಿದ ಅಧಿಕಾರಿಗಳಿಗೆ ಉತ್ತರ ನೀಡಲು ಸಾಕುಸಾಕಾಯಿತು.

ಕೃಷಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷೆ, `ಇಲಾಖೆಯ ಬಗ್ಗೆ ಸಮಗ್ರ ಮಾಹಿತಿಯಿಲ್ಲದೇ ನೀವು ಅಧಿಕಾರಿಗಳು ಸಭೆಗೆ ಬರುವ ಅಗತ್ಯವಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿವರ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಎ.ಸಿ.ನಟರಾಜ್ ಅವರು ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಕಡಿಮೆಯಾಗಿರುವ ಮತ್ತು ಮಳೆಯು ತಡವಾಗುತ್ತಿರುವ ಬಗ್ಗೆ ವಿವರಣೆ ನೀಡಿದರು. ಸಕಾಲಕ್ಕೆ ಬಿತ್ತನೆ ಬೀಜಗಳನ್ನು ಮತ್ತು ರಸಗೊಬ್ಬರ ಪೂರೈಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನು ಆಲಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿನ್ನಪ್ಪಯ್ಯ ಮತ್ತು ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ, `ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಕೆಯಾಗುತ್ತಿಲ್ಲ. ಜಾಗೃತಿ ಮೂಡಿಸಲಾಗುತ್ತಿಲ್ಲ. ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ನೀಡಲಾಗುತ್ತಿದೆ~ ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಎ.ಸಿ.ನಟರಾಜ್, `ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ಸಾಮಗ್ರಿಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಖರೀದಿಸಲು ರೈತರಿಗೆ ಮುಕ್ತ ಅವಕಾಶ ನೀಡಲಾಗಿದೆ. ಇಲಾಖೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ~ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಯು.ಚಂದ್ರಶೇಖರ್ ಅವರ ಅನುಪಸ್ಥಿತಿಯಲ್ಲಿ ಸಭೆಗೆ ಹಾಜರಾಗಿದ್ದ ಇಲಾಖೆಯ ಅಧಿಕಾರಿ ಕನ್ನಯ್ಯ ಅವರು ಇಲಾಖೆಯ ವಿವರಣೆ ನೀಡತೊಡಗಿದಾಗ, `ನೀವು ಇಲ್ಲಿ ಕೂತುಕೊಂಡೇ ವರದಿಯನ್ನು ಸಿದ್ಧಪಡಿಸುತ್ತೀರಿ. ಶಾಲೆಗೆ ಭೇಟಿ ನೀಡುವುದಿಲ್ಲ. ಶಾಲೆ ಮತ್ತು ಮಕ್ಕಳ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸುವುದಿಲ್ಲ. ನೀವು ಸರಿಯಾಗಿ ಕೆಲಸ ಮಾಡುವುದಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಜಿಲ್ಲಾ ಪಂಚಾಯಿತಿ ಸದಸ್ಯರು ಹೇಳಿದಾಗ ಸ್ಥಳಕ್ಕೆ ಭೇಟಿ ನೀಡುತ್ತೀರಿ. ಇಲ್ಲವೇ ಸುಮ್ಮನೆ ಇರುತ್ತೀರಿ. ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಶಿಕ್ಷಕರ ಕೊರತೆಯಿದೆ. ಶೌಚಾಲಯದ ವ್ಯವಸ್ಥೆಯಿಲ್ಲ. ಶಾಲಾ ಕಟ್ಟಡಗಳು ಪೂರ್ಣಗೊಂಡಿಲ್ಲ. ಶಿಕ್ಷಕರು ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಏನೂ ಕಲಿಯಲು ಸಾಧ್ಯ~ ಎಂದು ಬಿ.ಸಾವಿತ್ರಮ್ಮ ಪ್ರಶ್ನಿಸಿದರು.

`ಬಾಗೇಪಲ್ಲಿ ಮತ್ತು ಗುಡಿಬಂಡೆಯಲ್ಲಿ ಶಾಲೆಗಳು ದುಸ್ಥಿತಿಯಲ್ಲಿದ್ದು, ಶಿಕ್ಷಕರ ಕೊರತೆ ತೀವ್ರ ಸ್ವರೂಪದಲ್ಲಿದೆ. ಸಮಸ್ಯೆಗಳು ತೀವ್ರ ಸ್ವರೂಪದಲ್ಲಿದ್ದರೂ ಅವುಗಳನ್ನು ಪರಿಹರಿಸುವತ್ತ ಗಮನಹರಿಸಲಾಗುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯತನದಿಂದ ಕೆಲಸ ಮಾಡುತ್ತಿದ್ದಾರೆ~ ಎಂದು ದೂರಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ ಮಾತನಾಡಿ, `ಅಪೂರ್ಣಗೊಂಡ ಕಟ್ಟಡಗಳನ್ನು ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ. ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ತುರ್ತು ಕ್ರಮ ತೆಗೆದುಕೊಳ್ಳಿ~ ಎಂದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷತೆ ಅಮರಾವತಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎನ್.ಮಂಜುಳಾ ವೆಂಕಟೇಶ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.