ADVERTISEMENT

`ರಕ್ತನಿಧಿಗೆ ಬೇಕು ಇನ್ನಷ್ಟು ಸೌಲಭ್ಯ'

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 12:21 IST
Last Updated 19 ಜೂನ್ 2013, 12:21 IST

ಚಿಕ್ಕಬಳ್ಳಾಪುರ: `ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರೆಡ್‌ಕ್ರಾಸ್ ಸಂಸ್ಥೆಯು ರಕ್ತನಿಧಿ ಕೇಂದ್ರವನ್ನು ಸ್ಥಾಪಿಸಿದೆ. ಕೇಂದ್ರಕ್ಕೆ ಇನ್ನಷ್ಟು ಸೌಕರ್ಯ ಮತ್ತು ನೆರವಿನ ಅಗತ್ಯವಿದೆ. ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಉತ್ತಮ ಪ್ರೋತ್ಸಾಹ ದೊರೆತಲ್ಲಿ, ರಕ್ತನಿಧಿ ಕೇಂದ್ರವು ಇನ್ನಷ್ಟು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ' ಎಂದು ರಕ್ತನಿಧಿ ಕೇಂದ್ರದ ಕಾರ್ಯದರ್ಶಿ ನಾರಾಯಣಾಚಾರ್ಯ ತಿಳಿಸಿದರು.

ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ರಕ್ತನಿಧಿ ಕೇಂದ್ರಕ್ಕೆ ಇನ್ನೂ ಪ್ರತ್ಯೇಕ ಸ್ವಂತ ಕಟ್ಟಡ ಲಭ್ಯವಾಗಿಲ್ಲ. ಇನ್ನಷ್ಟು ಸೌಕರ್ಯ-ಸಲಕರಣೆಗಳು ಲಭ್ಯವಾಗಬೇಕಿದೆ. ಕೇಂದ್ರವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸೌಲಭ್ಯಗಳ ಅಗತ್ಯವಿದೆ' ಎಂದರು.

`ಹಲವಾರು ಅಡ್ಡಿ-ಆತಂಕ ಮತ್ತು ಸಮಸ್ಯೆಗಳ ನಡುವೆಯೇ ರಕ್ತನಿಧಿ ಕೇಂದ್ರವನ್ನು ಆರಂಭಿಸಿದ್ದೇವೆ. ಜಿಲ್ಲೆಯಲ್ಲಿ ರಕ್ತದ ಬೇಡಿಕೆ ಹೆಚ್ಚಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ರಕ್ತ ಸಂಗ್ರಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹೋಳಿ ಮತ್ತು ತಾಲ್ಲೂಕು ಮಟ್ಟದಲ್ಲಿ ಸಂಘ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದಲ್ಲಿ, ಹೆಚ್ಚಿನ ಪ್ರಮಾಣ ರಕ್ತ ಸಂಗ್ರಹಣೆ ಮಾಡಬಹುದು' ಎಂದು ಅವರು ಹೇಳಿದರು.

`ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಅನಾಥಾಶ್ರಮವೊಂದನ್ನು ತೆರೆಯುವ ಉದ್ದೇಶವಿದ್ದು, ನಿವೇಶನ ಮಂಜೂರು ಮಾಡಲು ಜಿಲ್ಲಾಡಳಿತ ಮುಂದಾಗಬೇಕು. ಜಿಲ್ಲೆಯ ವಿವಿಧೆಡೆ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಬೇಕು' ಎಂದು ಅವರು ಮನವಿ ಮಾಡಿದರು.

ರಕ್ತನಿಧಿ ಕೇಂದ್ರದ ಪದಾಧಿಕಾರಿಗಳ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್, `ರಕ್ತನಿಧಿ ಕೇಂದ್ರಕ್ಕೆ ಇನ್ನಷ್ಟು ಸೌಲಭ್ಯವನ್ನು ಒದಗಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಭಿವೃದ್ಧಿ ಅನುದಾನದ ರೂಪದಲ್ಲಿ ರೂ 1 ಕೋಟಿ ಮಂಜೂರು ಮಾಡಲು ಕೋರಲಾಗುವುದು' ಎಂದರು.

ಉಪ ವಿಭಾಗಾಧಿಕಾರಿ ಕೆ.ಟಿ.ಶಾಂತಲಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ, ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಾಬುರೆಡ್ಡಿ, ಡಿಡಿಪಿಐ ಅಜಿತ್ ಪ್ರಸಾದ್, ತಹಶೀಲ್ದಾರ್ ಡಿ.ಬಿ.ನಟೇಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.