ADVERTISEMENT

ರೇಷ್ಮೆ ಗೂಡು ಮಾರುಕಟ್ಟೆಗೆ ಸೌಕರ್ಯ ಕೊರತೆ

​ಪ್ರಜಾವಾಣಿ ವಾರ್ತೆ
Published 4 ಮೇ 2012, 6:35 IST
Last Updated 4 ಮೇ 2012, 6:35 IST
ರೇಷ್ಮೆ ಗೂಡು ಮಾರುಕಟ್ಟೆಗೆ ಸೌಕರ್ಯ ಕೊರತೆ
ರೇಷ್ಮೆ ಗೂಡು ಮಾರುಕಟ್ಟೆಗೆ ಸೌಕರ್ಯ ಕೊರತೆ   

ಶಿಡ್ಲಘಟ್ಟ: ಕೋಟ್ಯಂತರ ವ್ಯವಹಾರ ನಡೆಸುವ ಇಲ್ಲಿನ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಮೂಲ ಸೌಲಭ್ಯ ಕೊರತೆಯನ್ನು ಎದುರಿಸುತ್ತಿದೆ. ಈಚೆಗೆ ಬಿದ್ದ ಮಳೆಯಿಂದ ಮಾರುಕಟ್ಟೆಯಲ್ಲಿ ಕಾಲಿಡಲು ಹಿಂಜರಿಯುವಷ್ಟು ರಸ್ತೆಗಳು ಕೆಸರುಮಯವಾಗಿವೆ.

ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆಯು ವಹಿವಾಟಿನಲ್ಲಿ ರಾಜ್ಯದಲ್ಲಿ ಮೊದಲನೇ ಸ್ಥಾನ ಪಡೆದಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಹಾಗೂ ನೆರೆಯ ಆಂಧ್ರಪ್ರದೇಶ, ತಮಿಳುನಾಡಿನ ರೈತರು ಕೂಡ ರೇಷ್ಮೆ ಗೂಡಿಗೆ ಇಲ್ಲಿ ಬೆಲೆ ಹೆಚ್ಚು ಸಿಗುವುದೆಂಬ ಭರವಸೆಯಿಂದ ಬರುತ್ತಾರೆ. ಆದರೆ ಇಲ್ಲಿನ ಅವಸ್ಥೆ ಕಂಡು ಬೇಸರ ಪಡಬೇಕು.

ಅಸ್ತವ್ಯಸ್ಥ ಮಾರ್ಗಗಳು, ಎಲ್ಲೆಂದರಲ್ಲಿ ನಿಂತ ವಾಹನಗಳು, ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಯ ನಿರ್ವ ಹಣೆ ಕೊರತೆಯಿಂದ ಮಾರುಕಟ್ಟೆ ನಲುಗುತ್ತಿದೆ.`ಕಳೆದ ವರ್ಷ ಪೊಲೀಸ್ ಇಲಾಖೆ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಹಯೋಗದೊಂದಿಗೆ ಮಾರುಕಟ್ಟೆಯಲ್ಲಿನ ಕಳೆಗಿಡಗಳನ್ನು ತೆಗೆದು ಸ್ವಚ್ಛತೆ ಕಾರ್ಯವನ್ನು ಕೈಗೊಂಡಿತ್ತು.
 
ಪ್ರತಿ ತಿಂಗಳೂ ಮಾರುಕಟ್ಟೆಯ ನಿರ್ವಹಣೆಗೆ ಹಣವನ್ನು ವ್ಯಯಿಸುವುದಾಗಿ ಖರ್ಚು ತೋರಿಸುತ್ತಾರೆ ಅಷ್ಟೇ, ಆದರೆ ಎಲ್ಲವೂ ಇದ್ದಂತೆಯೇ ಇರುತ್ತದೆ.  ಪೂರ್ಣ ಪ್ರಮಾಣದ ಮಳೆ ಬೀಳುತ್ತಿಲ್ಲ. ಬಿದ್ದ ಒಂದು ಮಳೆಗೆ ಮಾರುಕಟ್ಟೆಯಲ್ಲಿ ಓಡಾಡುವ ದಾರಿ ಕೆಸರುಮಯವಾಗಿದೆ. ಇನ್ನು ಮಳೆಗಾಲದಲ್ಲಿ ಮಾರುಕಟ್ಟೆ ಊಹಿಸಲೂ ಆಗದು~ ಎಂದು ರೈತರೊಬ್ಬರು ಅಲವತ್ತು ಕೊಳ್ಳುತ್ತಾರೆ.

`ಕಾರ್ಯಾಧಾರಿತ ಪದ್ಧತಿಯಲ್ಲಿ ಮಾರುಕಟ್ಟೆ ಶುಚಿಗೊಳಿಸಲು ಪ್ರತಿ ತಿಂಗಳು ಸುಮಾರು 30 ಸಾವಿರ ರೂಪಾಯಿ ಖರ್ಚು ಮಾಡುತ್ತೇವೆ. ಮಳೆಯಿಂದಾಗಿ ಓಡಾಡುವ ರಸ್ತೆಯಲ್ಲಿ ನೀರು ನಿಲ್ಲುವುದರಿಂದ ಶೀಘ್ರ ಕ್ರಮ ಕೈಗೊಳ್ಳುವಂತೆ  ಎಂಜಿನಿಯರ್‌ಗೆ ತಿಳಿಸಿದ್ದೇವೆ.

ಶೌಚಾಲಯ ವ್ಯವಸ್ಥೆ ಸರಿಯಿರದ್ದರಿಂದ ಸುಲಬ್ ಶೌಚಾಲಯ ನಿರ್ಮಿಸಲು ಸರ್ಕಾರದ ಅನುಮೋದನೆಗೆ ಕಾಯುತ್ತಿದ್ದೇವೆ. ಮಾರುಕಟ್ಟೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿ, ಉಳಿದ ಸ್ಥಳದಲ್ಲಿ ಸ್ಲಾಬ್ ಹಾಹಿದರೆ ಕಳೆ ಗಿಡಗಳು ಬೆಳೆಯುವುದಿಲ್ಲ. ಈ ಬಗ್ಗೆ ಯೋಜನೆ ತಯಾರಿಸಿ ಕಳಿಸಿದ್ದೇವೆ~ ಎನ್ನುತ್ತಾರೆ ಮಾರುಕಟ್ಟೆ ಉಪನಿರ್ದೇಶಕ ಹನುಮಂತರಾಯಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.