ADVERTISEMENT

ರೈತರಿಗೆ ಕಷ್ಟ, ಉದ್ಯಮಕ್ಕೂ ನಷ್ಟ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 7:05 IST
Last Updated 21 ಮಾರ್ಚ್ 2011, 7:05 IST

ಚಿಕ್ಕಬಳ್ಳಾಪುರ: ನಗರದ ನಿವಾಸಿಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ರೈತರಿಗೆ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆ ತೀವ್ರ ಸ್ವರೂಪದಲ್ಲಿ ಕಾಡುತ್ತಿದ್ದು, ಅವರ ಬಹುತೇಕ ಕೆಲಸಗಳಿಗೆ ಅಡಚಣೆಯಾಗುತ್ತಿದೆ. ಪರೀಕ್ಷಾ ಸಮಯದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಮಾತ್ರವಲ್ಲದೇ ಸಣ್ಣಪುಟ್ಟ ಅಂಗಡಿ, ಮಳಿಗೆದಾರರು, ಹೋಟೆಲ್ ಮಾಲೀಕರೂ ಸಹ ವಿದ್ಯುತ್ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ಲೋಡ್‌ಶೆಡ್ಡಿಂಗ್ ನಿಗದಿಪಡಿಸದೇ ಮತ್ತು ವಿದ್ಯುತ್ ಕಡಿತದ ಸಮಯವನ್ನು ತಿಳಿಸದೇ ದಿನಕ್ಕೆ ಹಲವು ಬಾರಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದ್ದು, ನಿತ್ಯ ಜೀವನಕ್ಕೆ ತುಂಬ ತೊಂದರೆಯಾಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

‘ಮೊದಲೆಲ್ಲ ಲೋಡ್‌ಶೆಡ್ಡಿಂಗ್‌ವೆಂದರೆ ದಿನಕ್ಕೆ ಇಂತಿಷ್ಟು ಸಮಯ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುವುದು. ಆಯಾ ಕಾಲಾವಧಿಯೊಳಗೆ ಇತರ ಕೆಲಸ-ಕಾರ್ಯಗಳನ್ನು ಪೂರೈಸಿಕೊಳ್ಳಲು ನಮಗೆ ಅವಕಾಶ ಸಿಗುತಿತ್ತು. ಹೆಚ್ಚಿನ ತೊಂದರೆಯಾಗುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಲೋಡ್‌ಶೆಡ್ಡಿಂಗ್ ನಿಯಮವನ್ನು ಉಲ್ಲಂಘಿ ಸಿ ಮನಬಂದಂತೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ’ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಅನಿರೀಕ್ಷಿತ ಕಡಿತಗಳಿಂದ ತುಂಬ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು-ರೈತರು ಹೇಳಿದರೆ, ಆರ್ಥಿಕವಾಗಿ ಭಾರಿ ನಷ್ಟವಾಗುತ್ತಿದೆ ಎಂದು ಉದ್ಯಮಿಗಳು, ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಳೆಗೆ ನೂತನವಾಗಿ ನಿರ್ಮಿಸಲಾಗಿರುವ ಹರಾಜುಕಟ್ಟೆಯನ್ನು ಉದ್ಘಾಟಿಸಲು ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾದ ರೈತ ಸಂಘದ ಸದಸ್ಯರು ಮನವಿಪತ್ರ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿ ಮಾತನಾಡಿದ ಶೋಭಾ ಕರಂದ್ಲಾಜೆ, ‘ದೋಷಪೂರಿತ ವಿದ್ಯುತ್ ಉತ್ಪನ್ನ ಘಟಕಗಳನ್ನು ದುರಸ್ತಿಗೊಳಿಸಲಾಗಿದೆ. ಇನ್ನು ಮುಂದೆ ಯಾವುದೇ ಸಮಸ್ಯೆಗಳಿಲ್ಲದೇ ವಿದ್ಯುತ್ ಪೂರೈಸಲಾಗುವುದು’ ಎಂದು ಹೇಳಿದ್ದರು. ಅವರು ಭರವಸೆ ನೀಡಿ ಹಲವು ದಿನಗಳೇ ಕಳೆದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ವಿದ್ಯುತ್ ಪೂರೈಕೆಯಲ್ಲೂ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಿ ಕೆಲ ದಿನಗಳ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಕೆಲ ವಿದ್ಯಾರ್ಥಿಗಳು ಗೌರಿಬಿದನೂರಿನಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೆ ಸಮಸ್ಯೆ ಮಾತ್ರ ಪರಿಹಾರಗೊಳ್ಳಲಿಲ್ಲ.

‘ಮುಂಜಾವಿನ ಸಮಯದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವುದರಿಂದ ನಮಗೆ ತಿಂಡಿ ತಯಾರಿಸಲು ಸಾಧ್ಯವಾಗುವುದಿಲ್ಲ. ಹಿಟ್ಟು ರುಬ್ಬಲು, ಚಟ್ನಿ ಸಿದ್ಧಪಡಿಸಿಕೊಳ್ಳಲು ಮತ್ತು ಇನ್ನಿತರ ಕಾರ್ಯಗಳನ್ನು ಪೂರೈಸಿಕೊಳ್ಳಲು ಕಷ್ಟವಾಗುತ್ತಿದೆ. ಗ್ರಾಹಕರು ಬಯಸುವ ತಿಂಡಿಗಳನ್ನು ಸಮಯಕ್ಕೆ ಸರಿಯಾಗಿ ಸಿದ್ಧಪಡಿಸಲು ಸಾಧ್ಯವಾಗುವುದಿಲ್ಲ. ಬಯಸಿದ ತಿಂಡಿ ಸಿದ್ಧಗೊಳ್ಳದ ಕಾರಣ ಗ್ರಾಹಕರು ಬೇಸರಗೊಳ್ಳುತ್ತಾರೆ. ಕೆಲವರು ಬೇರೆ ತಿಂಡಿಯನ್ನು ಸವಿದು ಸಂತೃಪ್ತರಾಗುತ್ತಾರೆ. ಇನ್ನೂ ಕೆಲವರು ಬೇರೆಡೆ ಹೊರಟುಬಿಡುತ್ತಾರೆ. ವಿದ್ಯುತ್ ಸಮಸ್ಯೆಯಿಂದ ಆರ್ಥಿಕವಾಗಿ ನಷ್ಟವಾಗುತ್ತಿದೆ.

 ನಿಗದಿತ ಸಮಯಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುವುದು ಎಂದು ಬೆಸ್ಕಾಂನವರು ಮಾಹಿತಿ ನೀಡಿದರೆ, ನಾವು ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬಹುದು. ಪೂರ್ವಸೂಚನೆಯಿಲ್ಲದೇ ಸಮಸ್ಯೆ ಹೀಗೆ ಕಾಡಿದರೆ, ನಾವು ಹೋಟೆಲ್ ಉದ್ಯಮ ನಡೆಸುವುದು ಹೇಗೆ’ ಎಂದು ಹೋಟೆಲ್ ಮಾಲೀಕ್ ಸೀತಾರಾಮ ಪ್ರಶ್ನಿಸುತ್ತಾರೆ.ವಿದ್ಯುತ್ ಸಮಸ್ಯೆ ಶೀಘ್ರವೇ ಪರಿಹಾರಗೊಳ್ಳಬಹುದು ಎಂಬ ನಿರೀಕ್ಷೆಯನ್ನು ರೈತರು ಹೊಂದಿದ್ದಾರೆ. ಆದರೆ ಗಡುವು ಮೀರಿದ ನಂತರವೂ ಸಮಸ್ಯೆ ಇದೇ ರೀತಿಯಲ್ಲಿದ್ದರೆ, ಉಗ್ರ ಸ್ವರೂಪದಲ್ಲಿ ಪ್ರತಿಭಟನೆ ನಡೆಸಲು ರೈತರು ತೀರ್ಮಾನಿಸಿದ್ದಾರೆ.

 ‘ವಿದ್ಯುತ್ ಸಮಸ್ಯೆಯಿಂದ ಕೃಷಿ ಚಟುವಟಿಕೆಗೆ ತುಂಬ ತೊಂದರೆಯಾಗುತ್ತಿದೆ. ಜಮೀನಿಗೆ ನೀರು ಪೂರೈಸಲು, ರಾತ್ರಿ ವೇಳೆ ತೋಟದ ಕಡೆ ಹೋಗಲು ಮುಂತಾದವುಗಳಿಗೆ ಸಮಸ್ಯೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆಯವರು ಇಂಧನ ಸಚಿವೆ ಸಹ ಆಗಿದ್ದು, ಅವರ ಸಮಸ್ಯೆ ಬಗೆಹರಿಸುತ್ತಾರೆ ಎಂಬ ನಂಬಿಕೆಯಿದೆ. ಒಂದು ವೇಳೆ ಅವರು ಮಾತು ಉಳಿಸಿಕೊಳ್ಳುವಲ್ಲಿ ವಿಫಲರಾದಲ್ಲಿ, ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು’ ಎಂದು ರೈತರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.