ADVERTISEMENT

ರೈಲು ಎಂಜಿನ್‌ಗೆ ಮರಳು, ಕಲ್ಲು: ಸಂಚಾರಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 8:49 IST
Last Updated 12 ಡಿಸೆಂಬರ್ 2013, 8:49 IST

ಚಿಕ್ಕಬಳ್ಳಾಪುರ: ಕೆಲ ಕಿಡಿಗೇಡಿಗಳು ರೈಲು ಎಂಜಿನ್‌ನ ಹೊಗೆ ಪೈಪ್‌ನಲ್ಲಿ ಮರಳು, ಜೆಲ್ಲಿಕಲ್ಲು ತುಂಬಿ ತಾಂತ್ರಿಕವಾಗಿ ತೊಂದರೆ ಉಂಟು ಮಾಡಿದ ಕಾರಣ ಚಿಕ್ಕ­ಬಳ್ಳಾಪುರ– ಬೆಂಗಳೂರು ಪ್ಯಾಸೆಂಜರ್‌ ರೈಲು ಸುಮಾರು ಮೂರು ಗಂಟೆ ತಡ­ವಾಗಿ ಪ್ರಯಾಣ ಆರಂಭಿಸಿದ ಘಟನೆ ಬುಧವಾರ ನಡೆಯಿತು.

ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬೆಳಿಗ್ಗೆ 8ಕ್ಕೆ ಹೊರಡಬೇಕಿದ್ದ ರೈಲು ಬೆಳಿಗ್ಗೆ 11.10ಕ್ಕೆ ಪ್ರಯಾಣ ಆರಂಭಿಸಿತು. ಕೊನೆಯ ಕ್ಷಣದವರೆಗೆ ಪ್ರಯಾಸಪಟ್ಟ ನಂತರವೂ ರೈಲು ಎಂಜಿನ್‌ ದುರಸ್ತಿ ಸಾಧ್ಯವಾಗದಿದ್ದಾಗ, ಬೆಂಗಳೂರಿನಿಂದ ರೈಲು ಎಂಜಿನ್‌ ತರಿಸಿಕೊಂಡು ಪ್ರಯಾಣ ಆರಂಭಿಸಲಾಯಿತು. ಇದೆಲ್ಲದರ ಪರಿಣಾಮ ಕ್ರಾಸಿಂಗ್‌ ಸಮಸ್ಯೆಯಿಂದ ಬೆಂಗಳೂರು– ಕೋಲಾರ ಪ್ಯಾಸೆಂಜರ್‌ ರೈಲು ಕೂಡ 80 ನಿಮಿಷ ತಡವಾಗಿ ಸಂಚರಿಸಿತು.

ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾದ ಕಾರಣ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ತೊಂದರೆ ಅನುಭವಿಸ­ಬೇಕಾ­ಯಿತು. ರೈಲು ಎಂಜಿನ್‌ ದುರಸ್ತಿಯಾಗುವುದು ಕಷ್ಟ ಎಂಬುದು ಅರಿವಿಗೆ ಬಂದಾಗ, ಪ್ರಯಾಣಿಕರು ಅನಿವಾರ್ಯವಾಗಿ ಬಸ್‌ಗಳ ಮೊರೆ ಹೋಗಬೇಕಾ­ಯಿತು. ಬೆಂಗಳೂರಿಗೆ ಹೋಗಲು ಟಿಕೆಟ್‌ಗಳನ್ನು ಪಡೆದಿದ್ದರೂ ಸಹ ಬೇರೆ ದಾರಿ ಕಾಣದೇ ಬಸ್‌ಗಳಲ್ಲಿ ತೆರಳಿದರು.

ಸಾವಿರಾರು ಮಂದಿ ಪ್ರಯಾಣಿಕರು ಬೆಳಿಗ್ಗೆ ಬೆಂಗಳೂರಿಗೆ ಹೋಗಲು ಇದೇ ರೈಲು ಅವಲಂಬಿಸಿದ್ದಾರೆ. ಪ್ರಯಾಣಿಕರು ಅನುಕೂಲಕರವಾಗಿ ಹೋಗುವುದನ್ನು ಸಹಿಸದ ಕೆಲ ಕಿಡಿಗೇಡಿಗಳು ಬೇಕೆಂದೇ ಇಂಥ ಕೃತ್ಯ ಎಸಗಿದ್ದಾರೆ.

ಮಂಗಳವಾರ ಮಧ್ಯರಾತ್ರಿ ವೇಳೆ ಎಂಜಿನ್‌ ಮೇಲೆ ಹತ್ತಿ, ಹೊಗೆ ಸೂಸುವ ಪೈಪ್‌ನೊಳಗೆ ಮರಳು ಮತ್ತು ಜೆಲ್ಲಿಕಲ್ಲು ಪುಡಿ ಸುರಿದಿದ್ದಾರೆ. ರೈಲ್ವೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ರೈಲ್ವೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.