ADVERTISEMENT

ವಿವಾದಿತ ಉದ್ಯಾನ: ಅಧಿಕಾರಿಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 7:20 IST
Last Updated 14 ಜನವರಿ 2011, 7:20 IST

ಶಿಡ್ಲಘಟ್ಟ: ಪಟ್ಟಣದ ದಿಬ್ಬೂರಹಳ್ಳಿ ರಸ್ತೆಯ ಆಜಾದ್‌ನಗರದ ಪುರಸಭೆ ವ್ಯಾಪ್ತಿಯ ಉದ್ಯಾನವನಕ್ಕೆಂದು ಮೀಸಲಿದ್ದ ವಿವಾದಕ್ಕೀಡಾದ ಸ್ಥಳಕ್ಕೆ ಬುಧವಾರ ಕಂದಾಯ ಹಾಗೂ ಪುರಸಭೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.ಅಸ್ಸೆಸ್ಮೆಂಟ್ ನಂಬರ್ 3569ರ ನಿವೇಶನ ಸಂಖ್ಯೆ 84ಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮಲ್ಲಿಕಾರ್ಜುನ್, ಮುಖ್ಯಾಧಿಕಾರಿ ಚನ್ನೇಗೌಡ ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕರೊಂದಿಗೆ ಚರ್ಚಿಸಿದರು.

ಪಟ್ಟಣವಾಸಿ ಓ.ತಿಮ್ಮಯ್ಯ ತಮ್ಮ ಸ್ವಂತ 4.13 ಎಕರೆ ಜಮೀನನ್ನು ಪುರಸಭೆಗೆಂದು ದಾನ ಮಾಡಿದ್ದರು. ಆಜಾದ್ ನಗರದಲ್ಲಿರುವ ಈ ಸ್ಥಳವನ್ನು 1990ರಲ್ಲಿ ಭೂಪರಿವರ್ತನೆ ಮಾಡಿ, ಸರ್ವೆ ನಂ. 42ರಲ್ಲಿ 150 ಅಡಿ ಉದ್ದ ಮತ್ತು 140 ಅಡಿ ಅಗಲದ ಸ್ಥಳವನ್ನು ಓ.ತಿಮ್ಮಯ್ಯ ಪಾರ್ಕ್ ಎಂದು ಗುರುತಿಸಲಾಗಿದೆ.

ಪುರಸಭೆ ದಾಖಲೆಗಳು, ನಗರ ಯೋಜನಾ ಇಲಾಖೆ ಸೇರಿದಂತೆ ಎಲ್ಲ ಕಡೆ ಉದ್ಯಾನವನವೆಂದೇ ದಾಖಲೆಗಳು ಹೇಳುತ್ತವೆ. ಆದರೆ ಅದೇ ನಂಬರಿನ ನಿವೇಶನ ಆಜಾದ್‌ನಗರದ ಸಯ್ಯದ್‌ವಜೀರ್ ಎಂಬುವವರಿಗೆ ಖಾತೆಯಾಗಿದ್ದು, ಅವರು ಈ ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಪ್ರಸ್ತುತ ಅನುಭೋಗದಲ್ಲಿದ್ದಾರೆ.

ಈ ಸಂಬಂಧ ಪುರಸಭೆಯು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಅದರಂತೆ ಇಂದು ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಹಶೀಲ್ದಾರ್, ಮುಖ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.ಉದ್ಯಾನಕ್ಕೆ ಮೀಸಲಾದ ಸ್ಥಳದಲ್ಲಿ ಸೌದೆ ಮಂಡಿಗಳು ಇದ್ದು, ಇತ್ತೀಚೆಗೆ ಕಲ್ಲು ಚಪ್ಪಡಿಗಳನ್ನು ತಂದು ಗುಡ್ಡೆಹಾಕಿದ್ದು ಅದನ್ನು ತೆರವುಗೊಳಿಸುವಂತೆ ಸುತ್ತಮುತ್ತಲ ನಾಗರಿಕರು ಒತ್ತಾಯಿಸಿದರು.ಎರಡೂ ಕಡೆಯ ವಾದ, ವಿವಾದವನ್ನು ಗಮನಿಸಿದ ತಹಶೀಲ್ದಾರ್ ವಸ್ತುಸ್ಥಿತಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.