ADVERTISEMENT

`ಶಂಕರರ ಬೋಧನೆ ಸರ್ವಕಾಲಿಕ ಸತ್ಯ'

​ಪ್ರಜಾವಾಣಿ ವಾರ್ತೆ
Published 15 ಮೇ 2013, 6:27 IST
Last Updated 15 ಮೇ 2013, 6:27 IST

ಶಿಡ್ಲಘಟ್ಟ: ಶಾಸ್ತ್ರ ನಂಬಿಕೊಂಡು ಭಗವಂತನ ಮೇಲೆ ಭಕ್ತಿ ಮೂಡದಿದ್ದರೆ ಅಧ್ಯಾತ್ಮ ತತ್ವಕ್ಕೆ ಅರ್ಥವಿಲ್ಲ ಎಂದು ಸಾರಿದ ಶಂಕರಾಚಾರ್ಯರ ಬೋಧನೆ ಸರ್ವಕಾಲಿಕ ಸತ್ಯ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಅಭಿಪ್ರಾಯಪಟ್ಟರು.

ಪಟ್ಟಣದ ಅಗ್ರಹಾರ ಬೀದಿಯಲ್ಲಿರುವ ಏಕಾಂಬರೇಶ್ವರ ದೇವಾಲಯದಲ್ಲಿ ಶಂಕರ ಜಯಂತಿ ಅಂಗವಾಗಿ ಸೋಮವಾರ `ಶಂಕರರ ಚಿಂತನೆಗಳು' ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.

ಶಂಕರಾಚಾರ್ಯರ ಜೀವನ ಸಾಧನೆ ಹಿಮಾಲಯದಂತೆ ಮಹೋನ್ನತವಾದುವು. ನಶಿಸಿ ಹೋಗುತ್ತಿದ್ದ ಹಿಂದೂ ಧರ್ಮದ ಜಾಗೃತಿಗಾಗಿ ಅವರ ಸೇವೆ ಅನನ್ಯ. ಕಡಿಮೆ ವಯಸ್ಸಿನಲ್ಲಿ ಅವರು ಮನುಕುಲಕ್ಕೆ ಬೋಧಿಸಿದ ಉಪದೇಶ, ಚಿಂತನೆಗಳು ಹೃದಯ ಮನಸ್ಸುಗಳನ್ನು ತಣಿಸಿ, ಭಾವಬುದ್ದಿಗಳಿಗೆ ಪ್ರಚೋದನೆ ನೀಡುವಂತಹವು ಎಂದರು.

ಭೋಗ ವಸ್ತುಗಳಿಂದ ಆನಂದವಿಲ್ಲ. ಮಾನವ ಹುಟ್ಟಿರುವುದು ಸಂಕಟಪಡಲಿಕ್ಕಲ್ಲ - ಸಂತೋಷ ಪಡಲಿಕ್ಕೆ. ನಶ್ವರ ಶರೀರ ನಂಬಬೇಡಿ. ಮನಸ್ಸೇ ದೊಡ್ಡ ಸಂಪತ್ತು ಎಂದು ಬೋಧಿಸಿದ ಶಂಕರಾಚಾರ್ಯರ ಜೀವನ ಸಾಧನೆ ಅಪಾರ. ಅವರು ರಚಿಸಿರುವ ಭಜಗೋವಿಂದಂ, ಭಜಗೋವಿಂದಂ ಜನಪ್ರಿಯ ಗೀತ ರಚನೆಯಾಗಿದ್ದು, ಮಾನವ ಹುಟ್ಟಿನಿಂದ ಸಾಯುವವರೆಗೆ ಮಾಡುವ ಕರ್ತವ್ಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದರು.

ತಾಲ್ಲೂಕು ಬ್ರಾಹ್ಮಣಸಭಾ ಅಧ್ಯಕ್ಷ ಎ.ಎಸ್.ರವಿ, ಯುವಕ ಸಂಘದ ಅಧ್ಯಕ್ಷರಾದ ವಿ.ಕೃಷ್ಣ, ಜಿಲ್ಲಾ ಬ್ರಾಹ್ಮಣ ಸಂಘದ ಖಜಾಂಚಿ ಎಸ್.ವಿ.ನಾಗರಾಜರಾವ್, ವಲಯ ಕಾರ್ಯದರ್ಶಿ ಎನ್.ಶ್ರೀಕಾಂತ್, ಬಿ.ಆರ್.ಅನಂತಕೃಷ್ಣ, ವಕೀಲ ಎಸ್.ಆರ್.ಶ್ರೀನಿವಾಸಮೂರ್ತಿ, ಪಿಟೀಲು ವಿದ್ವಾನ್ ಶ್ಯಾಮಸುಂದರ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.