ADVERTISEMENT

ಶಾಸಕ ಕೃಷ್ಣಾರೆಡ್ಡಿಗೆ ಕೊಲೆ ಬೆದರಿಕೆ: ದೂರು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 8:27 IST
Last Updated 21 ಮಾರ್ಚ್ 2018, 8:27 IST

ಚಿಂತಾಮಣಿ: ‘ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ’ ಎಂದು ಶಾಸಕ ಎಂ.ಕೃಷ್ಣಾರೆಡ್ಡಿ ಸೋಮವಾರ ರಾತ್ರಿ ನಗರ ಠಾಣೆಗೆ ದೂರು ನೀಡಿದ್ದಾರೆ.

‘ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿಯ ಮಾದಮಂಗಲ ಗ್ರಾಮದಿಂದ ಸೋಮವಾರ ಬೆಳಿಗ್ಗೆ 10.45 ಗಂಟೆ ಸಮಯದಲ್ಲಿ ಕರೆ ಮಾಡಿ ಇಂದಿರಾ ಕ್ಯಾಂಟೀನ್‌ ಕಟ್ಟಡದ ಉದ್ಘಾಟನೆಗೆ ವಾಣಿ ಕೃಷ್ಣಾರೆಡ್ಡಿ ಅವರನ್ನು ಏಕೆ ಕರೆದುಕೊಂಡು ಬಂದಿರಿ, ಮಹಿಳೆಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದೀರಿ ಎಂದು ಆರೋಪಿಸಿದ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಸರ್ಕಾರಿ ಕಾರ್ಯಕ್ರಮಕ್ಕೆ ಎಲ್ಲರೂ ಬರಬಹುದು. ನೀನು ಯಾರು? ಏಕೆ ಈ ರೀತಿ ಮಾತನಾಡುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ಮುಂದೆ ನೋಡಿಕೊಳ್ಳುತ್ತೇನೆ ಎಂದ. ಜತೆಗೆ ಅಶ್ಲೀಲವಾಗಿ ಮಾತನಾಡಿ ಕರೆ ಸ್ಥಗಿತ ಮಾಡಿದ’ ಎಂದು ತಿಳಿಸಿದ್ದಾರೆ.

ADVERTISEMENT

‘ಮಾರ್ಚ್‌ 16ರಂದು ಎಪಿಎಂಸಿ ಯಾರ್ಡ್‌ನಲ್ಲಿ ಇಂದಿರಾ ಕ್ಯಾಂಟೀನ್‌ ಕಟ್ಟಡದ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮಕ್ಕೆ  50–200 ಜನರಿದ್ದ ಗುಂಪು ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿತ್ತು. ಪೊಲೀಸರು ಆರೋಪಿಗಳ ವಿರುದ್ಧ ಆಗಲೇ ಕ್ರಮ ಕೈಗೊಂಡಿದ್ದರೆ ಈ ರೀತಿಯ ಬೆದರಿಕೆ ಬರುತ್ತಿರಲಿಲ್ಲ’ ಎಂದು ಕೃಷ್ಣಾರೆಡ್ಡಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.