ADVERTISEMENT

ಸಂದಿಗ್ಧ ಸ್ಥಿತಿಯಲ್ಲಿ ಸಂಘಟನೆ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 8:25 IST
Last Updated 26 ಡಿಸೆಂಬರ್ 2017, 8:25 IST

ಗೌರಿಬಿದನೂರು: ‘ಬ್ರಾಹ್ಮಣರು ಭಿನ್ನಾಭಿಪ್ರಾಯ ಮರೆತು ಸಂಘಟನೆ ಗೊಳ್ಳುವ ಮೂಲಕ ತಮ್ಮ ಅಸ್ತಿತ್ವ ಉಳಿಸಿ ಕೊಳ್ಳಬೇಕಾಗಿರುವುದು ಇವತ್ತಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಅನಿವಾರ್ಯ ವಾಗಿದೆ’ ಎಂದು ಹೊರನಾಡು ಅನ್ನ ಪೂರ್ಣೇಶ್ವರಿ ದೇಗುಲದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ತಿಳಿಸಿದರು.

ಬ್ರಾಹ್ಮಣ ನೌಕರರ ಸೇವಾ ಸಂಘದ ಜಿಲ್ಲಾ ಘಟಕದ ವತಿಯಿಂದ ಪಟ್ಟಣದ ನದಿ ದಡದ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಬ್ರಾಹ್ಮಣ ನೌಕರರ ಜಿಲ್ಲಾ ಮಟ್ಟದ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಡೀ ಸನಾತನ ಧರ್ಮದಲ್ಲಿ ಬಹು ಜನಪ್ರಿಯ ಎಂದು ಕರೆಯಿಸಿಕೊಂಡಿರುವ ಏಕೈಕ ವ್ಯಕ್ತಿ ಬ್ರಾಹ್ಮಣ ಮಾತ್ರ. ಇಂದು ಬ್ರಾಹ್ಮಣರು ಅವಹೇಳನಕ್ಕೆ ಹಾಗೂ ನಿಂದನೆಗೆ ಗುರಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ನಾವೇ ಕಾರಣ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಬ್ರಾಹ್ಮಣ್ಯ ಉಳಿಯಬೇಕಾದರೆ ಇಂದಿನ ಯುವ ಪೀಳಿಗೆಗೆ ಸಂಸ್ಕಾರ ಕಲಿಸಬೇಕಾಗಿದೆ. ಬಹುತೇಕರು ತಮ್ಮ ತಂದೆ ತಾಯಿಗಳನ್ನು ಪೋಷಿಸದೆ ತಪ್ಪು ವಿಳಾಸ ನೀಡಿ ಅನಾಥಾಶ್ರಮಗಳಿಗೆ ಬಿಟ್ಟು ಬರುತ್ತಿರುವುದು ಬೇಸರದ ಸಂಗತಿ’ ಎಂದು ಹೇಳಿದರು.

ADVERTISEMENT

‘ಬ್ರಾಹ್ಮಣರ ಹೆಣ್ಣು ಮಕ್ಕಳು ಇತರೆ ಜಾತಿಯ ಯುವಕರ ಹಿಂದೆ ಹೋಗುತ್ತಿದ್ದಾರೆ ಎಂದರೆ ನಮ್ಮ ಬ್ರಾಹ್ಮಣ ಜಾತಿಯ ಯುವಕರಲ್ಲಿ ಇಲ್ಲದೇ ಇರುವುದು ಅನ್ಯ ಜಾತಿಯ ಯುವಕರಲ್ಲಿ ಏನು ಇದೇ ಎಂಬುದನ್ನು ಅರಿಯಬೇಕಾಗಿದೆ. ಬ್ರಾಹ್ಮಣರಲ್ಲಿಯೇ ವೈದ್ಯರು, ವಕೀಲರು, ಎಂಜಿನಿಯರ್‌ಗಳು, ಶಿಕ್ಷಕರು ಇಲ್ಲವೆ? ಅವರನ್ನೇ ಮದುವೆ ಆಗಬಹುದಲ್ಲ? ಇಂದಿನ ಯುವ ಪೀಳಿಗೆ ಸ್ವೇಚ್ಚಾಚಾರಕ್ಕೆ ಹಿರಿಯರೇ ಕಾರಣರಾಗಿದ್ದಾರೆ’ ಎಂದರು.

ಬ್ರಾಹ್ಮಣ ನೌಕರರ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆದಿಶೇಷರಾವ್ ಮಾತನಾಡಿ, ‘ಇಂದಿನ ಸರ್ಕಾರಗಳು ಜನಸಂಖ್ಯೆ ಆಧಾರದ ಮೇಲೆ ಆಯಾ ಜಾತಿ ಪಂಗಡಗಳಿಗೆ ಮನ್ನಣೆ ನೀಡುತ್ತಿವೆ. ಈ ಹೊತ್ತಿನಲ್ಲಿ ಬ್ರಾಹ್ಮಣ ಸಮುದಾಯ ಸಂಘಟನೆಗೊಂಡರೆ ಮಾತ್ರ ಬಲಿಷ್ಠವಾಗಲು ಸಾಧ್ಯ. ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಾಗಿದೆ. ಬ್ರಾಹ್ಮಣರು ಜನಿವಾರವನ್ನು ಬಚ್ಚಿಡಬೇಡಿ ತೋರಿಸಿ ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕಾಗಿದೆ’ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ಪ್ರತಿಭಾವಂತರನ್ನು ಗೌರವಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಿಂದ ಗಾಯತ್ರಿ ಮಾತೆ ಭಾವಚಿತ್ರವನ್ನು ರೈಲ್ವೆ ಸ್ಟೇಷನ್ ರಸ್ತೆ ಮಾರ್ಗವಾಗಿ ನಾಗಯ್ಯರೆಡ್ಡಿ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತದ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಸಲಾಯಿತು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಉಪಾಧ್ಯಕ್ಷ ಎಚ್.ಎನ್. ಹಿರಣಯ್ಯ, ಬ್ರಾಹ್ಮಣರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಟ್ಟೂರು ವೆಂಕಟೇಶ್, ಬೆಂಗಳೂರು ಶಂಕರ ಕ್ಯಾನ್ಸರ್ ಆಸ್ಪತ್ರೆ ಡಾ.ಶ್ರೀನಾಥ್, ಮಾನಸ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಶಿಧರ್, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ವಿ.ಮಂಜುನಾಥ್, ಮುಖಂಡರಾದ ಸಿ. ನಾಗಭೂಷಣ್, ಡಾ. ಭಾಸ್ಕರ್, ರಾಜೇಂದ್ರ ಪ್ರಸಾದ್, ಕೃಷ್ಣಮೂರ್ತಿ, ರವಿಶಂಕರ್, ಕೋಮಲಾ  ಮಂಜುನಾಥ್, ರಾಮಕೃಷ್ಣ,ಅಚ್ಚುತ್ ರಾವ್, ಪವನ್ ಕುಮಾರ್, ಉಪೇಂದ್ರ, ಸುಬ್ರಹ್ಮಣ್ಯ, ಬ್ಯಾಂಕ್ ಮಂಜು, ಹರೀಶ್ ಹತ್ವಾರ್ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.