ADVERTISEMENT

ಸಂಭ್ರಮ, ಸಡಗರದ ಸಮ್ಮೇಳನದಲ್ಲಿ ಕೊಂಚ ನಿರಾಸೆ

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 10:24 IST
Last Updated 15 ಜೂನ್ 2013, 10:24 IST

ಉತ್ತಮನೂರು ರಾಜಮ್ಮ ಮಂಟಪ (ಶಿಡ್ಲಘಟ್ಟ): `ಜಿಲ್ಲಾ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಎರಡು ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಯಿತು. ಎರಡೂ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದರು. ಎಲ್ಲೆಡೆ ಸಂಭ್ರಮ-ಸಡಗರ ಆವರಿಸಿತ್ತು. ಆದರೆ ಸಾಂಪ್ರದಾಯಿಕವಾಗಿ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಬೇಕಿದ್ದ ನಿರ್ಣಯಗಳು ಮಂಡನೆಯಾಗಲಿಲ್ಲ. ವಿವಿಧ ಗೋಷ್ಠಿಗಳಲ್ಲಿನ ವಿಷಯಗಳು ವಿಶಾಲ ವ್ಯಾಪ್ತಿ ಪಡೆದುಕೊಂಡಿತೇ ಹೊರತು ಜಿಲ್ಲೆಗೆ ಸಂಬಂಧಿಸಿದಂತೆ ತಲೆದೋರಿರುವ ಸವಾಲು, ಸಮಸ್ಯೆ ಮತ್ತು ಸಂಘರ್ಷಗಳ ಬಗ್ಗೆ ಹೆಚ್ಚು ಚರ್ಚೆಗಳು ನಡೆಯಲಿಲ್ಲ'

ಶಿಡ್ಲಘಟ್ಟದಲ್ಲಿ ಶುಕ್ರವಾರ ಸಮಾರೋಪಗೊಂಡ ಜಿಲ್ಲಾ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯಲ್ಲಿ ಕೇಳಿ ಬಂದ ಮಾತುಗಳಿವು. ಅದ್ದೂರಿತನ, ಸಂಭ್ರಮ, ಸಡಗರದಿಂದ ಆಚರಿಸಲಾದ ಸಮ್ಮೇಳನದಲ್ಲಿ ಸ್ಥಳೀಯ ವಿಷಯಗಳಿಗೂ ಹೆಚ್ಚಿನ ಪ್ರಾಧಾನ್ಯ ನೀಡಬೇಕಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು, `ಜಿಲ್ಲೆಗೆ ಸಾಹಿತ್ಯಿಕ, ಸಾಂಸ್ಕೃತಿಕ ಕೊಡುಗೆ ನೀಡಿದ ಸಾಹಿತಿಗಳನ್ನು ಮತ್ತು ಕವಿಗಳನ್ನು ಸಮ್ಮೇಳನಕ್ಕೆ ಕರೆಸಬೇಕಿತ್ತು. ಅವರ ಮೂಲಕ ಜಿಲ್ಲೆಯ ಕುರಿತು ಸಮಗ್ರ ದೃಷ್ಟಿಕೋನ ಅನಾವರಣಗೊಳ್ಳಬೇಕಿತ್ತು' ಎಂದು ಅನಿಸಿಕೆ ವ್ಯಕ್ತಪಡಿಸಿದರು.

`ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಎಲೆಮರೆಕಾಯಿಯಂತೆ ಕೆಲವರು ಕೆಲಸ ಮಾಡುತ್ತಿದ್ದರೆ, ಇನ್ನೂ ಕೆಲವರು ಸಮೀಪದ ಬೆಂಗಳೂರಿನಲ್ಲಿ ಮತ್ತು ದೂರದ ಊರುಗಳಲ್ಲಿ ನೆಲೆಸಿದ್ದರೂ ಸ್ಥಳೀಯ ಸಂಬಂಧಗಳನ್ನು ಇರಿಸಿಕೊಂಡಿದ್ದಾರೆ. ಅಂತಹವರನ್ನು ಸಮ್ಮೇಳನಕ್ಕೆ ಆಹ್ವಾನಿಸುವ ಮತ್ತು ಅವರ ವಿಚಾರಗಳನ್ನು ಕನ್ನಡಾಭಿಮಾನಿಗಳಿಗೆ ತಲುಪಿಸುವ ಕಾರ್ಯವನ್ನು ಕೈಗೊಂಡಿದ್ದರೆ, ಎಷ್ಟೋ ಉಪಯುಕ್ತವಾಗುತ್ತಿತ್ತು. ಸಮ್ಮೇಳನವು ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯಿತಾದರೂ ಮೆರುಗನ್ನು ಹೆಚ್ಚಿಸಲು ಜಿಲ್ಲೆಯ ನಂಟು ಹೊಂದಿರುವ ಕೆಲ ಸಾಹಿತ್ಯ ದಿಗ್ಗಜರನ್ನು ಕರೆಸಬೇಕಿತ್ತು' ಎಂದು ಸಾಹಿತ್ಯಾಭಿಮಾನಿಯೊಬ್ಬರು ತಿಳಿಸಿದರು.

`ಚಿಂತಾಮಣಿಯ ಸಾಹಿತಿ ಬಿ.ಆರ್.ಲಕ್ಷ್ಮಣ್‌ರಾವ್, ಶಾಸನತಜ್ಞ ಡಾ. ಶೇಷಶಾಸ್ತ್ರಿ, ಗೌರಿಬಿದನೂರಿನ ಟಿ.ಎನ್.ಸೀತಾರಾಂ, ಡಾ. ಹಂಪ ನಾಗರಾಜಯ್ಯ, ಕಮಲಾ ಹಂಪನಾ, ಜಾನಪದ ತಜ್ಞ ಡಾ.ಜಿ.ಶ್ರೀನಿವಾಸಯ್ಯ ಸೇರಿದಂತೆ ಕೆಲವಾರು ಮಂದಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕವಾಗಿ ಕೊಡುಗೆ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಅಥವಾ ಘಟನೆಗಳು ಜರುಗಿದರೂ ಅವುಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನ ಆಸಕ್ತಿ ತೋರುತ್ತಾರೆ. ಆದರೆ ಅವರನ್ನೇ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಆಹ್ವಾನಿಸಲಿಲ್ಲ. ಈ ದಿಗ್ಗಜರು ಉಪಸ್ಥಿತರಿದ್ದಿದ್ದರೆ ಇನ್ನಷ್ಟು ಮಹತ್ವ ಇರುತ್ತಿತ್ತು' ಎಂದುಶಿಕ್ಷಕ ದೇವರಾಜ್ `ಪ್ರಜಾವಾಣಿ'ಗೆ ತಿಳಿಸಿದರು.

`ರಾಷ್ಟ್ರ ಮತ್ತು ರಾಜ್ಯಮಟ್ಟದ ಸಾಹಿತ್ಯದ ದಿಗ್ಗಜರನ್ನು ಕರೆಯದಿರವುದು ಒಂದು ರೀತಿಯ ಲೋಪವಾದರೆ, ಸ್ಥಳೀಯ ಸಮಸ್ಯೆ ಮತ್ತು ಸವಾಲುಗಳನ್ನು ಕೇಂದ್ರವಾಗಿಟ್ಟುಕೊಂಡು ಗೋಷ್ಠಿಗಳನ್ನು ಆಯೋಜಿಸದಿರವುದು ಮತ್ತೊಂದು ತಪ್ಪು. ಶಾಶ್ವತ ನೀರಾವರಿ ಯೋಜನೆ, ರೇಷ್ಮೆಕೃಷಿಕರ ಸಂಕಷ್ಟಗಳು, ಹೈನುಗಾರಿಕೆ ಏಳು-ಬೀಳುಗಳು, ಜಿಲ್ಲೆ ಸಮಗ್ರ ಅಭಿವೃದ್ಧಿ, ಜಿಲ್ಲೆಗೆ ಸಂಬಂಧಿಸಿದಂತೆ ಆಗಬೇಕಿರುವ ಕನ್ನಡದ ಕಾರ್ಯಗಳು, ಕನ್ನಡ-ತೆಲುಗು ಭಾಷಾ ಸಾಮರಸ್ಯ, ಜಾಗತೀಕರಣದಿಂದ ಸಾಹಿತ್ಯದ ಮೇಲೆ ಆಗಿರುವ ಪ್ರಭಾವ, ಸಾಹಿತ್ಯದತ್ತ ಯುವಜನರನ್ನು ಸೆಳೆಯುವುದು ಹೇಗೆ ಎಂಬುದು ಸೇರಿದಂತೆ ವಿವಿಧ ಗೋಷ್ಠಿಗಳನ್ನು ಆಯೋಜಿಸಬೇಕಿತ್ತು' ಎಂದು ಅವರು ಹೇಳಿದರು.

`ಸಮ್ಮೇಳನವು ಒಂದು ರೀತಿಯಲ್ಲಿ ಅಚ್ಚುಕಟ್ಟಾಗಿ ನೆರವೇರಿತು. ಆದರೆ ಬೌದ್ಧಿಕವಾಗಿ ಸಮ್ಮೇಳನವು ಇನ್ನಷ್ಟು ಶ್ರೀಮಂತವಾಗಬೇಕಿದ್ದರೆ, ಸಮ್ಮೇಳನದ ಆಯೋಜಕರು ಮುಂಜಾಗ್ರತೆಯಾಗಿ ಕೆಲವಾರು ಆಲೋಚನೆಗಳನ್ನು ಮಾಡಬೇಕಿತ್ತು. ಜಿಲ್ಲೆಯ ತಜ್ಞರು, ಅನುಭವಿಗಳು ಮತ್ತು ನಾಡು-ನುಡಿಯ ಕುರಿತು ಅಪಾರವಾದ ಕಳಕಳಿ ಹೊಂದಿದವರ ಸಲಹೆ-ಸೂಚನೆಗಳನ್ನು ಪಡೆಯಬೇಕಿತ್ತು. ಆಗ ಸಮ್ಮೇಳನವು ಇನ್ನಷ್ಟು ಪ್ರಾಮುಖ್ಯತೆ ಪಡೆಯುತಿತ್ತು. ಐತಿಹಾಸಿಕ ದಾಖಲೆಯಾಗಿ ಉಳಿಯುತಿತ್ತು. ಸಮ್ಮೇಳನದ ಗೋಷ್ಠಿಗಳು ದೀರ್ಘಕಾಲದವರೆಗೆ ನೆನಪಿನಲ್ಲಿ ಉಳಿಯುತ್ತಿದ್ದವು' ಎಂದು ಅವರು ಹೇಳಿದರು.

`ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಆಧರಿಸಿ ಅತ್ಯುತ್ತಮ ರೀತಿಯ ಸ್ಮರಣ ಸಂಚಿಕೆಯನ್ನಾದರೂ ಹೊರತರಲು ಸಮ್ಮೇಳನದ ಆಯೋಜಕರು ಪ್ರಾಮಾಣಿಕ ಪ್ರಯತ್ನ ನಡೆಸಬೇಕಿತ್ತು. ತರಾತುರಿಯಲ್ಲಿ ಸ್ಮರಣಸಂಚಿಕೆಯನ್ನು ತೋರಿಸಲಾಯಿತೆ ಹೊರತು ಪೂರ್ಣ ಸಿದ್ಧವಾಗಿರುವ ಕುರಿತು ಮಾಹಿತಿ ನೀಡಲಿಲ್ಲ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.