ಚಿಂತಾಮಣಿ: ನಗರದಲ್ಲಿ ಶನಿವಾರ ಮತ್ತು ಭಾನುವಾರ ನಡೆಯುವ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಗಸುಬ್ರಮಣ್ಯಂ ಸುಬ್ಬಪ್ಪ ಶರ್ಮಾ ಆಯ್ಕೆಯಾಗಿದ್ದಾರೆ. ಅವರು ಸುಬ್ಬಪ್ಪ ಸ್ವಾಮಿಯೆಂದೇ ಚಿರಪರಿತರು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪರಿಣತಿ ಗಳಿಸಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ತಾಲ್ಲೂಕಿನ ಕೋಟಗಲ್ ಗ್ರಾಮದಲ್ಲಿ 1947ರ ಜನವರಿ 29ರಂದು ವೆಂಕಟರಾಮಶಾಸ್ತ್ರಿ ಮತ್ತು ಗೌರಮ್ಮ ದಂಪತಿಗೆ ಜನಿಸಿದ ನಾಗಸುಬ್ರಮಣ್ಯಂ 10ನೇ ತರಗತಿವರೆಗೆ ವಿದ್ಯಾಭಾಸ ಮಾಡಿದ್ದಾರೆ. ಅವರ ತಾತಾ ಶ್ರೀನಿವಾಸ್ ಶಾಸ್ತ್ರಿ ತ್ರಿಭಾಷಾ ಪಂಡಿತರಾಗಿದ್ದರು. ಕಿರಿ ವಯಸ್ಸಿನಲ್ಲೇ ಮಹಾಭಾರತ, ಭಾಗವತ, ಪುರಾಣಗಳ ವಾಚನದಿಂದ ಹಾಗೂ ತೆಲುಗು ಸಾಹಿತ್ಯದಿಂದ ಪ್ರಭಾವಿತರಾದರು.
ಅವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಯೋಗಿ ನಾರಾಯಣ ಮಹಾತ್ಮೆ, ಭಜಗೋವಿಂದಂ, ಶಿವಾಪರಾಧ ಕ್ಷಮಾಪಣ ಸ್ತೋತ್ರ, ದೇವಿ ಅಪರಾಧ ಕ್ಷಮಾಪಣ ಸ್ತೋತ್ರ, ವಿದ್ಯಾತೀರ್ಥ ಭಾರತೀ ವಿಜಯಂ, ನರಸಿಂಹ ಭಾರತೀ ವಿಜಯಂ, ಮುಕ್ಕೊಂಡ್ಲ ಪುರಿ ಮಹಾತ್ಮ್ಯಮು, ಗೌರಿ ಪದ್ಯ ಕಲಾವಳಿ, ವೆಂಕಟರಾಮ ಶತಕಮು, ಶಾಮ ಭಟ್ಟ ಶತಕಮು, ಮೊದ್ದು ಸಿದ್ದನ ಪದ್ಯಗಳು, ವಿಶ್ವೇಶ್ವರ ಸೀಸಮುಲು, ವೀರ ಬ್ರಹ್ಮೇಂದ್ರ, ಎಲೆಕ್ಷನ್ ದಂಡಕಂ, ಭಕ್ತ ಪಾರಿಜಾತ ಶತಕ, ಸತ್ಯನಾರಾಯಣ ಮಹಾತ್ಮೆ, ಪರ್ವತ ಪುತ್ರಿ ಪದ್ಯಗಳು, ಸೀತಾರಾಮ ಕಲ್ಯಾಣಂ, ಸ್ಥಳೀಯ ತೆಲುಗು ಗಾದೆಗಳ ಸಂಗ್ರಹ, ಸಂದರ್ಭೋಚಿತ ಪದ್ಯಗಳು ಮುಂತಾದ ಕೃತಿಗಳನ್ನು ಅವರು ರಚಿಸಿದ್ದಾರೆ.
ನಾಗಸುಬ್ರಮಣ್ಯಂ ಸದ್ಯಕ್ಕೆ ಸರ್ವಜ್ಞನ ವಚನಗಳನ್ನು ತೆಲುಗಿನಲ್ಲಿ ಭಾವಾನುವಾದ ಮಾಡುತ್ತಿದ್ದಾರೆ. ಈವರೆಗೆ 250 ತ್ರಿಪದಿಗಳನ್ನು ತೆಲುಗಿನ ತೇಟ ಗೀತೆಯ ಮಾದರಿಯಲ್ಲಿ ರಚಿಸಿದ್ದಾರೆ. ಚಿಂತಾಮಣಿಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರಿಗೆ ಪೌರ ಸನ್ಮಾನ ಮಾಡಲಾಗಿತ್ತು. ಕನ್ನಡ ಸೇನೆ, ಟಿಪ್ಪು ವಿಚಾರ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಮುಂತಾದ ಸಂಘಟನೆಗಳು ಅವರನ್ನು ಸನ್ಮಾನಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.