ADVERTISEMENT

ಸೌಲಭ್ಯ ಪೂರೈಸಲು ಕೃಷಿ ಸಚಿವರ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:48 IST
Last Updated 20 ಸೆಪ್ಟೆಂಬರ್ 2013, 8:48 IST

ಚಿಕ್ಕಬಳ್ಳಾಪುರ: ರೈತರಿಗೆ ಸೂಕ್ತ ರೀತಿಯ ಮಾಹಿತಿ ಮತ್ತು ಮಾರ್ಗ­ದರ್ಶನ ನೀಡಬೇಕಿದ್ದ ರೈತ ಸಂಪರ್ಕ ಕೇಂದ್ರವು ಯಾವುದೇ ರೀತಿಯಲ್ಲೂ ಪ್ರಯೋಜನಕಾರಿ ಆಗದಿರುವುದು ಶೋಚನೀಯ. ರೈತರಿಗೆ ಅಗತ್ಯ ಔಷಧಿ ಮತ್ತು ಇನ್ನಿತರ ವಸ್ತುಗಳನ್ನು ಪೂರೈಸ­ಬೇಕಾದ ಕೇಂದ್ರದಲ್ಲಿ ಯಾವುದೇ ಮೂಲಭೂತ ಸೌಲಭ್ಯ­ಗಳಿಲ್ಲದಿರು­ವುದಕ್ಕೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಕೃಷಿ ಕ್ಷೇತ್ರದ ಪರಿಶೀಲನೆಗಾಗಿ ಬುಧ­ವಾರ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಅವರು ಅಧಿಕಾರಿಗಳು ಮತ್ತು  ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು. ‘ರೈತರಿಗೆ ನೆರವಾಗಲೆಂದೇ ತೆರೆಯಲಾಗಿರುವ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಯಾವುದೇ ರೀತಿಯ ಮಾಹಿತಿ ಮತ್ತು ಮಾರ್ಗದರ್ಶನ ಸಿಗದಿದ್ದರೆ ಏನರ್ಥ. ನೀವೆಲ್ಲಾ ಇಲ್ಲಿ ಏನೂ ಮಾಡುತ್ತಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿಗೆ ಬಳಸಲಾಗುವ ಔಷಧಿ, ರಸಗೊಬ್ಬರ, ಸಾಧನ–ಸಲಕರಣೆಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲದಿರುವುದು ಮತ್ತು ಅವುಗಳ ದರಪಟ್ಟಿಯನ್ನು ಕೂಡ ಪ್ರದರ್ಶಿಸದಿರುವುದು ಕರ್ತವ್ಯ­ಲೋಪ. ಸಂಪರ್ಕ ಕೇಂದ್ರಗಳಲ್ಲಿ ಸರಿ­ಯಾದ ಮಾಹಿತಿ ಸಿಗದಿದ್ದರೆ, ರೈತರು ಏನು ಮಾಡಬೇಕು? ಯಾವ ಔಷಧಿ, ರಸಗೊಬ್ಬರ ಖರೀದಿಸಬೇಕು ಎಂಬು­ದರ ಬಗ್ಗೆ ತಿಳಿಸುವರು ಯಾರು’ ಎಂದು ಪ್ರಶ್ನಿಸಿದರು.

ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಹೆಚ್ಚಿನ ಮುತುವರ್ಜಿ ವಹಿಸಿ, ಸಂಪರ್ಕ ಕೇಂದ್ರದಲ್ಲಿ ಎಲ್ಲವೂ ಸುವ್ಯವಸ್ಥಿತವಾಗಿ ಇರುವಂತೆ ನೋಡಿಕೊಳ್ಳಬೇಕು. ರೈತ­ರಿಗೆ ಎಲ್ಲ ರೀತಿಯ ಸೌಲಭ್ಯಗಳು ದೊರೆ­ಯು­­ವಂತೆ ಮಾಡಬೇಕು. ರೈತರು ತೊಂದರೆ ಒಳಗಾಗುವಂತಹ ಪರಿಸ್ಥಿತಿ ಬರಬಾರದು ಎಂದು  ತಿಳಿಸಿದರು.

ಕೃಷಿ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿರುವ ಬಗ್ಗೆ ಮಾಹಿತಿ ಪಡೆದ ಅವರು ಭರ್ತಿ ಮಾಡಲು ಕ್ರಮ ಕೈಗೊಳ್ಳು­ವುದಾಗಿ ತಿಳಿಸಿದರು.
ವಿಧಾನಸಭಾ ಉಪಾಧ್ಯಕ್ಷ ಎನ್‌.­ಎಚ್‌.ಶಿವಶಂಕರ್‌ ರೆಡ್ಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎ.­ರಾಮ­­­ದಾಸ್, ಸಹಾಯಕ ನಿರ್ದೇಶಕಿ ಅನುರೂಪಾ, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಕಿರಣ್‌ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.