ADVERTISEMENT

ಹೋರಾಟದಿಂದ ಪಕ್ಷ ಬಲವರ್ಧನೆ: ಜಿವಿಎಸ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 10:05 IST
Last Updated 13 ಜನವರಿ 2012, 10:05 IST
ಹೋರಾಟದಿಂದ ಪಕ್ಷ ಬಲವರ್ಧನೆ: ಜಿವಿಎಸ್
ಹೋರಾಟದಿಂದ ಪಕ್ಷ ಬಲವರ್ಧನೆ: ಜಿವಿಎಸ್   

ಚಿಕ್ಕಬಳ್ಳಾಪುರ:  `ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಸವಾಲು ಒಡ್ಡುವುದರ ಜೊತೆಗೆ ಜನಪರವಾಗಿ ಹೋರಾಟ ನಡೆಸುವುದರ ಮೂಲಕ ರಾಜ್ಯದೆಲ್ಲೆಡೆ ಸಿಪಿಎಂ ಪಕ್ಷಬಲಪಡಿಸ ಲಾಗುವುದು~ ಎಂದು ಸಿಪಿಎಂ ರಾಜ್ಯ ಘಟಕದ ನೂತನ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ತಿಳಿಸಿದರು.

`ಜನಸಾಮಾನ್ಯರು ಪ್ರತಿನಿತ್ಯವೂ ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರ ವಾಗಿರಿಸಿಕೊಂಡು ಅವುಗಳ ಪರಿಹಾರಕ್ಕೆ ಆಗ್ರಹಿಸಿ ಸಂಘರ್ಷ ನಡೆಸಲಾಗುವುದು. ಜನಜಾಗೃತಿ ಮೂಡಿಸುವ ಮೂಲಕ ಪಕ್ಷವನ್ನು ಹಂತಹಂತವಾಗಿ ಬಲಪಡಿ ಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಅವರು ಗುರುವಾರ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

`ಚಿಕ್ಕಬಳ್ಳಾಪುರದಲ್ಲಿ ನಾಲ್ಕು ದಿನಗಳ ಕಾಲ ನಡೆದ ಸಿಪಿಎಂ 20ನೇ ರಾಜ್ಯ ಸಮ್ಮೇಳನವು ಯಾವುದೇ ಅಡ್ಡಿ-ಆತಂಕವಿಲ್ಲದೇ ಯಶಸ್ವಿಯಾಗಿ ನೆರವೇರಿದೆ. ಪಂಕ್ತಿ ಭೇದ ವಿರೋಧಿಸಿ ಪ್ರತಿಭಟನೆ ನಡೆಸುವುದು, ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸುವುದು ಸೇರಿದಂತೆ ಸಮ್ಮೇಳನದಲ್ಲಿ ಪ್ರಮುಖವಾಗಿ 32 ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಕೈಗೊಳ್ಳಲಾಗಿರುವ ನಿರ್ಣಯಗಳನ್ನು ಹಂತಹಂತವಾಗಿ ಜಾರಿಗೆ ತರಲಾಗುವುದು~ ಎಂದು ಅವರು ತಿಳಿಸಿದರು.

`ಸಿಪಿಎಂ ಬಲವಾಗಿ ಇರುವ ಕಡೆಗಳಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಲಾಗುವುದು. ಪಕ್ಷವು ಬಲವಾಗಿ ಇರದಿರುವ ಕಡೆ ಹೋರಾಟಗಳ ಮೂಲಕ ಇನ್ನಷ್ಟು ಸಬಲಗೊಳಿಸಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ಹಲವು ಸ್ವರೂಪಗಳಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುವುದು~ ಎಂದು ಹೇಳಿದರು.

ಸಮ್ಮೇಳನದ ವಿಶೇಷತೆಗಳನ್ನು ಪ್ರಸ್ತಾಪಿಸಿದ ಅವರು, `ಹಣ, ಮದ್ಯ ಸೇರಿದಂತೆ ಯಾವುದೇ ರೀತಿಯ ಅಸೆ ಆಮಿಷವಿಲ್ಲದೇ ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ಸಮ್ಮೇಳನದ ಬೃಹತ್ ರ‌್ಯಾಲಿಯಲ್ಲಿ ಭಾಗವಹಿಸಿದ್ದರು. ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದೇ ರ‌್ಯಾಲಿ ಯಶಸ್ವಿಯಾಗಿ ನೆರವೇರಿತು. ಯಾವುದೇ ರೀತಿಯ ಸಮಸ್ಯೆ ತಲೆದೋರಲಿಲ್ಲ ಎಂದು ಸ್ವತಃ ಪೊಲೀಸರೇ ಹೇಳಿದ್ದಾರೆ. ಜಿಲ್ಲೆಯ ಜನರಲ್ಲಿ ಸಮ್ಮೇಳನವು ಭಾರಿ ಪ್ರಭಾವ ಬೀರಿದೆ~ ಎಂದರು.

`ಸಮ್ಮೇಳನ ಯಶಸ್ವಿಯಾಗಿದ್ದು ಒಬ್ಬರು-ಇಬ್ಬರಿಂದಲ್ಲ, ಸಮ್ಮೇಳನಕ್ಕಾಗಿ 500ಕ್ಕೂ ಹೆಚ್ಚು ಕಾರ್ಯಕರ್ತರು ಮೂರು ತಿಂಗಳ ಕಾಲ ಶ್ರಮಿಸಿದ್ದಾರೆ. ಎಲ್ಲೆಡೆ ಹೋಗಿ ಪ್ರಚಾರ ಮಾಡಿದ್ದಾರೆ. ನಾಲ್ಕು ತಾಲ್ಲೂಕುಗಳ ಗ್ರಾಮಗಳಿಗೆಲ್ಲ ಸಂಚರಿಸಿ, ಪ್ರತಿಯೊಂದು ಮನೆಯಿಂದ ನಿಧಿ ಸಂಗ್ರಹಿಸಿದ್ದಾರೆ. ಬೇರೆ ಪಕ್ಷದವರೂ ಸಹ ನಿಧಿ ನೀಡಿದ್ದಾರೆ~ ಎಂದು ಹೇಳಿದರು. ಪಕ್ಷದ ಮುಖಂಡರಾದ ಸಿದ್ದಗಂಗಪ್ಪ, ಎಂ.ಪಿ.ಮುನಿವೆಂಕಟಪ್ಪ, ಚನ್ನರಾಯಪ್ಪ, ಬಿ.ಎನ್.ಮುನಿಕೃಷ್ಣಪ್ಪ ಮತ್ತು ಅಕ್ರಂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಕೆಂಬಾವುಟ ಕಾಪಾಡೋದೇ ಕಷ್ಟ!
ಚಿಕ್ಕಬಳ್ಳಾಪುರ: `ರಸ್ತೆ, ಕಂಬ ಮತ್ತು ಕಟ್ಟಡಗಳ ಮೇಲೆ ಹಾರಾಡುವ ಕೆಂಬಾವು ಟಗಳು ರಾತ್ರಿಯಾದರೆ ಸಾಕು, ಕಣ್ಮರೆಯಾಗುತ್ತವೆ. ನೋಡನೋಡುತ್ತಿದ್ದಂತೆ,  ಅವುಗಳನ್ನು ಯಾರ‌್ಯಾರೋ ಒಯ್ದುಬಿಡುತ್ತಾರೆ. ಬೆಳಿಗ್ಗೆ ಹುಡುಕಾಟ ನಡೆಸಿದಾಗ, ಅವು ಮನೆಗಳ ಮೇಲೆ ರಾರಾಜಿಸುತ್ತ ಇರುತ್ತವೆ~.

ಹೀಗೆ ಹೇಳಿದವರು ಸಿಪಿಎಂ ಕಾರ್ಯಕರ್ತರು. ಸಿಪಿಎಂ 20ನೇ ರಾಜ್ಯ ಸಮ್ಮೇಳನ ಬುಧವಾರ ಕೊನೆಗೊಂಡ ಹಿನ್ನೆಲೆಯಲ್ಲಿ ರಸ್ತೆ, ಕಂಬ ಮತ್ತು ಕಟ್ಟಡಗಳ ಮೇಲೆ ಅಳವಡಿಸಲಾಗಿದ್ದ ಪಕ್ಷದ ಬ್ಯಾನರ್, ಬಂಟಿಂಗ್ಸ್ ಮತ್ತು ಕೆಂಬಾವುಟಗಳನ್ನು ತೆರವುಗೊಳಿಸುತ್ತಿದ್ದ ವೇಳೆ ಈ ವಿಷಯವನ್ನು ಬಹಿರಂಗಪಡಿಸಿದರು.

`ಬಾಗೇಪಲ್ಲಿ ಸೇರಿದಂತೆ ಬೇರೆ ಬೇರೆ ತಾಲ್ಲೂಕಿನಿಂದ ಬಂದಿರುವ ಜನರು ಸದ್ದಿಲ್ಲದೇ ಒಂದೊಂದೇ ಬಾವುಟಗಳನ್ನು ಒಯ್ದುಬಿಡುತ್ತಾರೆ. ಮುಂದಿನ ಸಮ್ಮೇಳನಕ್ಕೆ ಅಥವಾ ಹೋರಾಟಕ್ಕೆ ಉಪಯುಕ್ತವಾಗುತ್ತದೆ ಎಂಬ ಭಾವನೆಯಲ್ಲಿ ಒಯ್ಯುತ್ತಾರೆ. ಕೆಲವರು ಮನೆಯಲ್ಲಿ ಮುಚ್ಚಿಟ್ಟುಕೊಂಡರೆ, ಇನ್ನೂ ಕೆಲವರು ಮನೆಗಳ ಮೇಲೆ ಅಳವಡಿಸುತ್ತಾರೆ. ಈ ಎಲ್ಲ ಕಾರಣಗಳಿಂದಲೇ ನಾವು ಕೆಂಬಾವುಟಗಳನ್ನು ಕಾಪಾಡುವುದು ಕಷ್ಟ~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT