ADVERTISEMENT

‘ಮಳೆ’ನಾಡಾದ ಚಿಕ್ಕಬಳ್ಳಾಪುರ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 6:39 IST
Last Updated 14 ಸೆಪ್ಟೆಂಬರ್ 2013, 6:39 IST

ಚಿಕ್ಕಬಳ್ಳಾಪುರ: ಕಳೆದ ಎರಡು ವಾರ­ಗಳಿಂದ ದಿನ ಬಿಟ್ಟು ದಿನ ಮಳೆ ಸುರಿ­ಯುತ್ತಿದ್ದು, ಬಯಲುಸೀಮೆ ಪ್ರದೇಶ­ವೆಂದೇ ಗುರುತಿಸುವ ಜಿಲ್ಲೆಯು ದಿಢೀರ್‌ ‘ಮಳೆ’ನಾಡು ಪ್ರದೇಶವಾಗಿ ಮಾರ್ಪ-­ಟ್ಟಿದೆ.

ಇನ್ನೇನು ಮಳೆಗಾಲ ಮುಗಿಯಿತು, ಬೆಳೆಗಳು ನೆಲ ಕಚ್ಚಿದವೆಂದು ರೈತರು ನಿರಾಸೆಯಿಂದ ತಲೆಯ ಮೇಲೆ ಕೈಯಿಟ್ಟು­­ಕೊಂಡು ಮುಂದೇನು ಎಂದು ಯೋಚನೆ ಮಾಡುವ ವೇಳೆಗೆ ಸರಿಯಾಗಿ ಮಳೆ ಸುರಿಯುತ್ತಿದೆ. ಆಶಾ ಭಾವನೆ ಕಳೆದುಕೊಂಡಿದ್ದ ಕೆಲ ರೈತರು ಬಿತ್ತನೆ ಮಾಡುತ್ತಿದ್ದರೆ, ಇನ್ನೂ ಕೆಲ ರೈತರು ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದಾರೆ.

ಆಗಸ್ಟ್‌ ಅಂತ್ಯದವರೆಗಿನ ಹವಾ­ಮಾನಕ್ಕೂ ಮತ್ತು ಈಗಿನ ವಾತಾ­ವರಣಕ್ಕೂ ಸಾಕಷ್ಟು ಬದಲಾವಣೆ­ಯಾಗಿದ್ದು, ಎರಡು ವಾರದೊಳಗೆ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಒಮ್ಮೆ ಧಾರಾಕಾರವಾಗಿ, ಮಗದೊಮ್ಮೆ ಜಡಿ­ಜಡಿಯಾಗಿ ಸುರಿಯುತ್ತಿರುವ ಮಳೆ ಇಡೀ ವಾತಾವರಣವನ್ನೇ ತಂಪಾಗಿಸಿದೆ. ಜಿಲ್ಲೆಯಲ್ಲಿ ಇಂತಹ ಮಳೆ ಕಂಡು ವರ್ಷ­ಗಳೇ ಗತಿಸಿದ್ದವು ಎಂದು ಪರಿಸರ­ವಾದಿಗಳು ಹೇಳುತ್ತಿದ್ದರೆ, ನಮ್ಮಲ್ಲಿ ಬತ್ತಿದ್ದ ಆಶಾಕಿರಣ ಮತ್ತೆ ಚಿಗುರಿದೆ ಎನ್ನುತ್ತಿದ್ದಾರೆ ರೈತರು.

ಜಿಲ್ಲೆಯ ಆರೂ ತಾಲ್ಲೂಕುಗಳಲ್ಲಿ ಕೃಷಿ ಚಟುವಟಿಕೆ ಕೊಂಚ ಬಿರುಸು ಪಡೆದಿದ್ದು, ರೈತರು ಬೀಜ ಮತ್ತು ಯೂರಿಯಾ ಖರೀದಿಗೆ ಮುಂದಾಗುತ್ತಿದ್ದಾರೆ. ಈಗ ಸುರಿಯುತ್ತಿರುವ ಮಳೆ ಇನ್ನೊಂದು ತಿಂಗಳ ಕಾಲ ಮುಂದುವರಿದರೆ ನಾವು ನೆಮ್ಮದಿಯಿಂದ ಕೃಷಿ ಕೆಲಸ ಮಾಡ­ಬಹುದು. ಒಂದೆರಡು ವಾರ ಸುರಿದು ಒಮ್ಮೆಲೇ ನಿಂತುಬಿಟ್ಟರೆ, ನಮ್ಮ ಪಾಡು ಇನ್ನಷ್ಟೂ ಗಂಭೀರವಾಗಲಿದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸು­ತ್ತಾರೆ. ರೈತರಿಗೆ ನೆರವಾಗುವ ಉದ್ದೇಶ­ದಿಂದ ರಸಗೊಬ್ಬರ ಸೇರಿದಂತೆ ಇತರ ಅಗತ್ಯತೆ ಪೂರೈಸಲು ಕೃಷಿ ಇಲಾಖೆ ಕ್ರಮ ಜರಗುಸುತ್ತಿದೆ.

ಜೂನ್‌, ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಸಮರ್ಪಕವಾಗಿ ಮಳೆ­ಯಾಗದ ಕಾರಣ ಕೊಂಚ ಆತಂಕ­ವಾಗಿತ್ತು. ಬಿತ್ತನೆ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ ಎಂಬ ಭೀತಿ ಆವರಿಸಿತ್ತು. ಭೂಮಿ ತೇವವಾಗದೇ ಬೆಳೆ ಬೆಳೆಯುವುದಾದರೂ ಹೇಗೆ? ಕೊಳವೆ­ಬಾವಿಗಳನ್ನು ಕೊರೆಸುವಷ್ಟು ಶಕ್ತಿಯೂ ನಮಗಿಲ್ಲ. ಒಂದು ವೇಳೆ ಕೊರೆಸಿದರೂ ಕೆಲವೇ ದಿನಗಳಲ್ಲಿ ಅದು ಕೂಡ ಬತ್ತು­ತ್ತದೆ. ಆದರೆ ಸದ್ಯಕ್ಕೆ ಮಳೆ ಬರು­ತ್ತಿರು­ವುದರಿಂದ ಮನಸ್ಸಿಗೆ ಸ್ವಲ್ಪ ನೆಮ್ಮದಿ. ಉತ್ತಮ ಬೆಳೆ ಬಂದುಬಿಟ್ಟರೆ, ಮೈಮೇಲಿ­ರುವ ಸಾಲವನ್ನೆಲ್ಲ ತೀರಿಸಬಹುದು ಎಂದು ನಾಯನಹಳ್ಳಿ ಗ್ರಾಮಸ್ಥ ವೆಂಕ­ಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಬಹು­ತೇಕ ರೈತರು ಮುಸುಕಿನ ಜೋಳ ಮತ್ತು ರಾಗಿ ಬಿತ್ತನೆ ಮಾಡಿದ್ದು, ಅವು 4 ರಿಂದ 5 ಅಡಿಯವರೆಗೆ ಎತ್ತರ ಬೆಳೆದಿದೆ. ಇತರ ತಾಲ್ಲೂಕುಗಳಲ್ಲಿ ಬೆಳೆಯಲಾಗುವ ಭತ್ತ, ರಾಗಿ, ಮುಸುಕಿನ ಜೋಳ, ಪಾಪ್‌­ಕಾರ್ನ್‌, ತೃಣಧಾನ್ಯ, ತೊಗರಿ, ಅಲ­ಸಂದೆ, ನೆಲಗಡಲೆ, ಸೂರ್ಯಕಾಂತಿ ಮತ್ತು ಇತರ ವಾಣಿಜ್ಯ ಬೆಳೆಗಳು ಕೂಡ ಚೇತರಿಸಿಕೊಂಡಿವೆ. ಬಿತ್ತನೆಯಾಗದ ಜಮೀನಿ­ನಲ್ಲಿ ಬಿತ್ತನೆ ನಡೆದಿದ್ದು, ಜಮೀನು­ಗಳು ಹಸಿರಾಗಿ ಕಂಗೊಳಿ­ಸುತ್ತಿವೆ. ಕಳೆದ ಮೂರು ತಿಂಗಳಿನಿಂದ ರೈತರ ಮೊಗದಲ್ಲಿದ್ದ ಆತಂಕದ ಛಾಯೆ ಈಗ ನಿವಾರಣೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಸೆ.1ರಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಶೇ 37­ರಷ್ಟು ಇದ್ದ ಮಳೆ ಕೊರತೆಯನ್ನು ನೀಗಿ­ಸಿದೆ. ಸೆ. 12ರವರೆಗಿನ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಈವರೆಗೆ ಸರಾಸರಿ 14.01 ಸೆ.ಮೀ.ಗಳಷ್ಟು ಮಳೆ­ಯಾಗಿದೆ. ಜಿಲ್ಲೆ­ಯಲ್ಲಿ ಅಕ್ಟೋಬರ್‌­ವರೆಗೆ ಮಳೆ ಮುಂದು-­ವರಿಯುವ ಸಾಧ್ಯತೆ­ಯಿದ್ದು, ರೈತರು ಆತಂಕಪಡಬೇಕಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎ.ರಾಮ­ದಾಸ್‌ ತಿಳಿಸಿದರು.

ವರ್ಷದಲ್ಲೇ ಅತ್ಯಧಿಕ ಮಳೆ ಈ ತಿಂಗಳಲ್ಲಿ ಆಗಿದೆ. ಇಡೀ ಜಿಲ್ಲೆಯಲ್ಲಿ ಅತ್ಯಧಿಕ 25.4 ಸೆ.ಮೀ.ಗಳಷ್ಟು ಮಳೆ ಸೆ. 9ರಂದು ಸುರಿಯಿತು. ಸೆ.1ರಂದು 10.58 ಸೆ.ಮೀ, ಸೆ.3ರಂದು 11.71 ಸೆ.ಮೀ. ಮತ್ತು ಸೆ.11ರಂದು 21.52 ಸೆ.ಮೀ.ಗಳಷ್ಟು ಮಳೆ ಸುರಿಯಿತು. ಜಮೀನು ತೇವಗೊಂಡಿದ್ದರಿಂದ ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಅನು­ಕೂಲವಾಗಿದೆ ಎಂದು ಅವರು ತಿಳಿ­ಸಿದರು.

ವಿವಿಧೆಡೆ ಮಳೆ
ಚಿಕ್ಕಬಳ್ಳಾಪುರ: ಸೆ.1 ರಿಂದ 12ರವರೆಗಿನ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯ ಆರು ತಾಲ್ಲೂಕುಗಳಲ್ಲೂ ಉತ್ತಮ ಮಳೆಯಾಗಿದೆ. ಮಳೆ ವಿವರ ಹೀಗಿದೆ. ಬಾಗೇಪಲ್ಲಿ–10.04 ಸೆ.ಮೀ, ಚಿಕ್ಕಬಳ್ಳಾಪುರ–12.42 ಸೆ.ಮೀ, ಚಿಂತಾಮಣಿ–12.78 ಸೆ.ಮೀ, ಗೌರಿಬಿದನೂರು–20.78 ಸೆ.ಮೀ, ಗುಡಿಬಂಡೆ–13.28 ಸೆ.ಮೀ. ಮತ್ತು ಶಿಡ್ಲಘಟ್ಟದಲ್ಲಿ 14.76 ಸೆ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.