ADVERTISEMENT

116 ನಗರ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರ ಚುನಾವಣೆ: ಆಯೋಗ ಸಿದ್ಧತೆ

ಚುನಾವಣೆಗಳ ಸಾಲು: ರಾಜಕೀಯ ಪಕ್ಷಗಳಿಗೆ ಮತ್ತೊಂದು ಸವಾಲು

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 6:34 IST
Last Updated 7 ಜೂನ್ 2018, 6:34 IST

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಕಾವು ತಣ್ಣಗಾಗುತ್ತಿದ್ದಂತೆ 116 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದ್ದು, ಮತ್ತೊಂದು ಚುನಾವಣೆ ಪರ್ವಕ್ಕೆ ರಾಜಕೀಯ ಪಕ್ಷಗಳು ಸಜ್ಜಾಗಬೇಕಾಗಿದೆ.

ಶಾಸಕರಾಗಿ ಆಯ್ಕೆಯಾದ ಕಾರಣಕ್ಕೆ ಬಿ.ಎಸ್. ಯಡಿಯೂರಪ್ಪ, ಬಿ. ಶ್ರೀರಾಮುಲು, ಸಿ.ಎಸ್‌. ಪುಟ್ಟರಾಜು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಮತ್ತು ವಿಧಾನಸಭೆಯಲ್ಲಿ ಖಾಲಿ ಇರುವ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದ ಕಾರಣಕ್ಕೆ ವಿಧಾನಸಭೆಯಲ್ಲಿ ‘ಮೈತ್ರಿ’ ಮಾಡಿಕೊಂಡು ಅಧಿಕಾರ ಸೂತ್ರ ಹಿಡಿದಿರುವ ಜೆಡಿಎಸ್‌– ಕಾಂಗ್ರೆಸ್‌ಗೆ ಹಾಗೂ ಬಿಜೆಪಿಗೆ ಈ ಚುನಾವಣೆಗಳು ಸವಾಲಾಗಲಿದೆ.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ ಮತ್ತು ರಾಮನಗರ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳನ್ನು ಬಿಟ್ಟು, ಉಳಿದ ಜಿಲ್ಲೆಗಳಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ಅವಧಿ ಇದೇ ಸೆಪ್ಟೆಂಬರ್‌ಗೆ ಅಂತ್ಯವಾಗಲಿದೆ. ಈ ಸಂಸ್ಥೆಗಳ ಮತ್ತು ಮೇಲ್ದರ್ಜೆಗೇರಿಸಿದ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳು ಸೇರಿ ಒಟ್ಟು 2,822 ವಾರ್ಡ್‌ಗಳಿಗೆ ಚುನಾವಣೆ ನಡೆಯಬೇಕಿದೆ.

ADVERTISEMENT

ಪೂರ್ವಸಿದ್ಧತೆಗೆ ಸೂಚನೆ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗ ಸುತ್ತೋಲೆ ಹೊರಡಿಸಿದೆ. ಇದೇ 11ರ ಒಳಗೆ ಮತದಾರರ ಕರಡು ಪಟ್ಟಿ ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಿ 27ರ ಒಳಗೆ ಅಂತಿಮ ಪಟ್ಟಿ ಪ್ರಕಟಿಸಬೇಕು ಎಂದು ಆಯೋಗ ಸೂಚಿಸಿದೆ.

ಮತದಾನ ಕೇಂದ್ರಗಳ ಪಟ್ಟಿ, ಚುನಾವಣೆ‌ ನಡೆಯುವ ವಾರ್ಡ್‌ ಗಳಿಗೆ ಅನುಗುಣವಾಗಿ ಚುನಾವಣಾ ಅಧಿಕಾರಿಗಳ ಮತ್ತು ಸಿಬ್ಬಂದಿಯ ನೇಮಕ, ವಿದ್ಯುನ್ಮಾನ ಮತಯಂತ್ರಗಳ ಸಂಗ್ರಹಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲೂ ಆಯೋಗ ಸ್ಪಷ್ಟಪಡಿಸಿದೆ.

ಸಿಬ್ಬಂದಿ ನೇಮಕದ ಪಟ್ಟಿ, ಅಭ್ಯರ್ಥಿಗಳ ಚುನಾವಣಾಚ್ಚದ ಪರಿಶೋಧನೆಗೆ ಅಧಿಕಾರಿಗಳ ನೇಮಕ, ಮತಗಟ್ಟೆಗಳಿಗೆ ಅಗತ್ಯವಾದ ಲೇಖನ ಸಾಮಗ್ರಿಗಳ ಖರೀದಿ, ಅಗತ್ಯ ಇರುವ ಅನುದಾನದ ಲೆಕ್ಕ ಮತ್ತಿತರ ಎಲ್ಲ ವಿವರಗಳ ಪ್ರಸ್ತಾವನೆ ಸಿದ್ಧಪಡಿಸಿ ಆಯೋಗಕ್ಕೆ ಸಲ್ಲಿಸಬೇಕು ಎಂದೂ ಆಯೋಗ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.