ADVERTISEMENT

ಚಿಕ್ಕಬಳ್ಳಾಪುರ ಪಿಎಲ್‌ಡಿ ಬ್ಯಾಂಕ್: ಬಿಜೆಪಿ ಮಣಿಸಲು ಮೈತ್ರಿ ಹೋರಾಟ

ಪಿಎಲ್‌ಡಿ ಬ್ಯಾಂಕ್‌ ಚುನಾವಣೆ: 12 ಸ್ಥಾನಗಳ ಪೈಕಿ ಬಿಜೆಪಿಯ ಇಬ್ಬರು ಅವಿರೋಧ ಆಯ್ಕೆ, ಫೆ.23 ರಂದು ಮತದಾನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 20:00 IST
Last Updated 19 ಫೆಬ್ರುವರಿ 2020, 20:00 IST
ನಗರದಲ್ಲಿ ತಲೆ ಎತ್ತುತ್ತಿರುವ ಪಿಎಲ್‌ಡಿ ಬ್ಯಾಂಕಿನ ನೂತನ ಸಂಕೀರ್ಣ
ನಗರದಲ್ಲಿ ತಲೆ ಎತ್ತುತ್ತಿರುವ ಪಿಎಲ್‌ಡಿ ಬ್ಯಾಂಕಿನ ನೂತನ ಸಂಕೀರ್ಣ   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕಿನ ಚುನಾವಣೆಗೆ ಫೆ.23 ರಂದು ಮತದಾನ ನಡೆಯಲಿದೆ. ಈಗಾಗಲೇ ಚುನಾವಣಾ ಕಣ ರಂಗೇರಿದ್ದು ತಾಲ್ಲೂಕಿನ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಪಿಎಲ್‌ಡಿ ಚುಕ್ಕಾಣಿ ಹಿಡಿಯಲು ಆಡಳಿತಾರೂಢರು ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಸುಮಾರು 85 ವರ್ಷಗಳ ಇತಿಹಾಸ ಉಳ್ಳ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಸುಮಾರು ಐದು ದಶಕಗಳಷ್ಟು ಜೆಡಿಎಸ್‌ ಪ್ರಾಬಲ್ಯವಿತ್ತು. ಶಾಸಕ ಡಾ.ಕೆ.ಸುಧಾಕರ್ ಅವರ ತಂತ್ರಗಾರಿಕೆ ಫಲವಾಗಿ ಬ್ಯಾಂಕ್ ಕಳೆದ ಐದು ವರ್ಷದಿಂದ ಕಾಂಗ್ರೆಸ್‌ ತೆಕ್ಕೆಗೆ ಬಂದಿತ್ತು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸುಧಾಕರ್‌ ಬಣದವರೆಲ್ಲ ಬಿಜೆಪಿಗರಾಗಿ ಬದಲಾಗಿ ಇದೇ ಮೊದಲ ಬಾರಿಗೆ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಕೂಡ ಬಿಜೆಪಿ ಖಾತೆ ತೆರೆಯಲು ಸಿದ್ಧತೆ ನಡೆಸಿದ್ದು, ಅದನ್ನು ತಡೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ಕಸಿಯುವ ಕಸರತ್ತು ನಡೆಸಿವೆ.

ADVERTISEMENT

ಪಿಎಲ್‌ಡಿ ಬ್ಯಾಂಕ್‌ ಆಡಳಿತ ಮಂಡಳಿ 11 ಸಾಲಗಾರರ ಕ್ಷೇತ್ರ ಮತ್ತು ಒಂದು ಸಾಲಗಾರರಲ್ಲದ ಕ್ಷೇತ್ರಗಳು ಸೇರಿದಂತೆ ಒಟ್ಟು 12 ನಿರ್ದೇಶಕರನ್ನು ಹೊಂದಿದೆ. ಈ ಪೈಕಿ ಈಗಾಗಲೇ ಬಿಜೆಪಿ ಎರಡು ಸ್ಥಾನಗಳನ್ನು ಅವಿರೋಧವಾಗಿ ತನ್ನ ಮಡಿಲಿಗೆ ಹಾಕಿಕೊಂಡಿದೆ. ಅಗಲಗುರ್ಕಿ ಕ್ಷೇತ್ರದಿಂದ (ಬಿಸಿಎಂ-ಬಿ) ಹಾಲಿ ಅಧ್ಯಕ್ಷ ಪಿ.ನಾಗೇಶ್ ಮತ್ತು ಪೆರೇಸಂದ್ರ ಕ್ಷೇತ್ರದಿಂದ (ಎಸ್‌ಸಿ) ತಿರುಮಳಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸದ್ಯ, ಇನ್ನುಳಿದ 10 ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಲು ತೆರೆಮರೆಯಲ್ಲಿ ರಾಜಕೀಯ ತಂತ್ರಗಾರಿಕೆ ಚುರುಕು ಪಡೆದಿದೆ.

ಅಗಲಗುರ್ಕಿ ಕ್ಷೇತ್ರದಿಂದ ಎರಡನೇ ಬಾರಿಗೆ ಪುನರಾಯ್ಕೆ ಬಯಸಿ ಹಾಲಿ ಅಧ್ಯಕ್ಷ ಪಿ.ನಾಗೇಶ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದರು. ಅವರ ಪ್ರತಿ ಸ್ಪರ್ಧಿಯಾಗಿ ಕಾಂಗ್ರೆಸ್, ಜೆಡಿಎಸ್ ಬೆಂಬಲಿತ ನಾರಾಯಣಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ನಾರಾಯಣಸ್ವಾಮಿ ನಾಮಪತ್ರ ತಾಂತ್ರಿಕ ದೋಷದಿಂದ ತಿರಸ್ಕೃತವಾದ ಪರಿಣಾಮ ನಾಗೇಶ್ ಅವಿರೋಧವಾಗಿ ಆಯ್ಕೆಯಾದರು. ಇನ್ನೊಂದೆಡೆ ಪರೇಸಂದ್ರ ಬಿಜೆಪಿ ಅಭ್ಯರ್ಥಿ ತಿರುಮಳಪ್ಪ ವಿರುದ್ಧವಾಗಿ ಯಾರು ಸ್ಪರ್ಧಿಸದ ಕಾರಣ ಅವರು ಅವರಿಗೂ ‘ಅದೃಷ್ಟ’ ಸುಲಭವಾಗಿ ದಕ್ಕಿತು.

ಇತ್ತೀಚೆಗೆ ನಡೆದ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್‌ ‘ಹೊಂದಾಣಿಕೆ’ ರಾಜಕೀಯ ಉತ್ತಮ ಪ್ರತಿಫಲ ನೀಡಿದ ಕಾರಣಕ್ಕೆ ಉಭಯ ಪಕ್ಷಗಳ ಮುಖಂಡರು ಅದೇ ‘ಜಾದೂ’ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಮಾಡಲು ಮುಂದಾಗಿದ್ದಾರೆ. ಎರಡು ಕ್ಷೇತ್ರಗಳನ್ನು (ನಂದಿ– ಜೆಸಿಬಿ ಮಂಜುನಾಥ, ಸಾಲಗಾರರಲ್ಲದ ಕ್ಷೇತ್ರ–ಮಹಮ್ಮದ್ ದಾವೂದ್‌) ಕಾಂಗ್ರೆಸ್‌ಗೆ ಬಿಟ್ಟುಕೊಟ್ಟ ಜೆಡಿಎಸ್‌ ಉಳಿದ 10 ಕ್ಷೇತ್ರಗಳಲ್ಲಿ ಬಿಜೆಪಿಗೆ ತೊಡೆ ತಟ್ಟಿತ್ತು. ಈ ಪೈಕಿ ಈಗಾಗಲೇ ಎರಡು ಸ್ಥಾನಗಳು ಅವಿರೋಧ ಆಯ್ಕೆಯಾಗಿವೆ. ಬಿಜೆಪಿ ಎದುರಿಗಿನ ಈ ಮೈತ್ರಿ ಹೋರಾಟ ಎಷ್ಟರಮಟ್ಟಿಗೆ ಫಲ ನೀಡುತ್ತದೆ ತಿಳಿಯಲು ಫಲಿತಾಂಶದ ವರೆಗೆ ಕಾಯಬೇಕಿದೆ.

ಸಾಲಗಾರರ ಕ್ಷೇತಗಳಲ್ಲಿ ಪ್ರತಿ ಕ್ಷೇತ್ರದಲ್ಲಿ 150 ರಿಂದ 200 ವರೆಗೆ ಮತ್ತು ಸಾಲಗಾರರಲ್ಲದ ಕ್ಷೇತ್ರದಲ್ಲಿ 1,000ಕ್ಕೂ ಅಧಿಕ ಮತದಾರರು ಇದ್ದಾರೆ. ಒಂದೆಡೆ ಸಚಿವರಾಗಿರುವ ಸುಧಾಕರ್ ಅವರು ತಮ್ಮ ವರ್ಚಸ್ಸು ಉಳಿಸಿಕೊಳ್ಳಲು, ಇನ್ನೊಂದೆಡೆ ಮೈತ್ರಿ ನಾಯಕರು ಪ್ರತಿಷ್ಠೆ ಮೆರೆಯಲು ಜಿದ್ದಿಗೆ ಬಿದ್ದ ಕಾರಣ ಮತದಾರರಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ, ಮತದಾರರನ್ನು ಪೈಪೋಟಿಯಲ್ಲಿ ಮನವೊಲಿಸುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.