ADVERTISEMENT

ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 15:25 IST
Last Updated 12 ಫೆಬ್ರುವರಿ 2020, 15:25 IST

ಚಿಕ್ಕಬಳ್ಳಾಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿ ಕಾರ್ಯನಿರ್ವಹಿಸುವ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಮತ್ತು ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿ (ಕೈವಾರ) ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಸೇರಿದಂತೆ ಅಲ್ಪಸಂಖ್ಯಾತರ ಸಮುದಾಯದವರಿಗೆ ಶೇ 75 ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ಶೇ 25ರಷ್ಟು ಹಾಗೂ ಹಿಂದುಳಿದ ವರ್ಗಕ್ಕೆ ಮೀಸಲಾತಿ ಇರುತ್ತದೆ. ಪ್ರತಿ ಶಾಲೆಯಲ್ಲಿ 60 ಸ್ಥಾನಗಳು ನಿಗದಿಪಡಿಸಲಾಗಿದೆ. ಇದರಲ್ಲಿ ಶೇ 50ರಷ್ಟು ವಿದ್ಯಾರ್ಥಿನಿಯರಿಗೆ ಪ್ರವೇಶ ಇರುತ್ತದೆ.

ಅರ್ಹತೆ: 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ADVERTISEMENT

ಆದಾಯದ ಮಿತಿ ₹2.50 ಲಕ್ಷ ಮೀರಿರಬಾರದು. ಅರ್ಜಿಗಳನ್ನು ಮೇಲ್ಕಂಡ ವಸತಿ ಶಾಲೆಗಳಲ್ಲಿ, ಜಿಲ್ಲಾ ಕಚೇರಿ, ಆಯಾ ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ಕಚೇರಿ ಮತ್ತು ತಾಲ್ಲೂಕು ಅರಿವು ಮೂಡಿಸುವ ಮಾಹಿತಿ ಕೇಂದ್ರಗಳಲ್ಲಿ ಉಚಿತವಾಗಿ ಪಡೆದು, ಭರ್ತಿ ಮಾಡಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಮಾರ್ಚ್ 15 ಕೊನೆಯ ದಿನ. ಹೆಚ್ಚಿನ ಮಾಹಿತಿ: ಚಿಕ್ಕಬಳ್ಳಾಪುರ–9620896378, ಚಿಂತಾಮಣಿ- 08154-250450.

ಕೆಎಎಸ್ ಮತ್ತು ಎಫ್‌ಡಿಎ ಪರೀಕ್ಷೆಗಳಿಗೆ ತರಬೇತಿ
ಚಿಕ್ಕಬಳ್ಳಾಪುರ: 
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಕರ್ನಾಟಕ ಸರ್ಕಾರವು ಬರುವ ಮೇ ತಿಂಗಳಲ್ಲಿ ನಡೆಸಲಿರುವ ಕೆಎಎಸ್ ಮತ್ತು ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿ ಶಿಬಿರ ಏರ್ಪಡಿಸಲಾಗಿದೆ.

ಆಸಕ್ತರು ಫೆಬ್ರುವರಿ 20ರ ಒಳಗಾಗಿ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ: 0821-2515944.

ಟಿ.ಇ.ಟಿ ಪರೀಕ್ಷಾ ಪೂರ್ವ ತರಬೇತಿ
ಚಿಕ್ಕಬಳ್ಳಾಪುರ:
2019-20ನೇ ಸಾಲಿನ ಉರ್ದು ಶಾಲಾ ಶಿಕ್ಷಕರ ಹುದ್ದೆಗೆ ನೇಮಕಾತಿ ಬಯಸಿ ಟಿ.ಇ.ಟಿ. ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಫೆ. 10 ರಿಂದ ಮಾರ್ಚ್ 10ರ ವರೆಗೆ ಪರೀಕ್ಷಾ ಪೂರ್ವ ತರಬೇತಿಯನ್ನು ಉಚಿತವಾಗಿ ಚಿಕ್ಕಬಳ್ಳಾಪುರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ (ಡಯಟ್‌) ಆಯೋಜಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಫೆ.12ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿ: 9902348760.

ಉದ್ಯಮಶೀಲತಾ ಅಭಿವೃದ್ಧಿ ತರಬೇತಿ
ಚಿಕ್ಕಬಳ್ಳಾಪುರ: 
ಬೆಂಗಳೂರು ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್) ಜಿಲ್ಲೆಯಲ್ಲಿ 10 ದಿನಗಳ ಅವಧಿಯ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯನ್ನು ಉಚಿತವಾಗಿ ನೀಡಲು ನಿರ್ಧರಿಸಿರುತ್ತಾರೆ.

ಜಿಲ್ಲೆಯಲ್ಲಿರುವ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯಮ ಸ್ಥಾಪಿಸಲು ಬೇಕಾಗುವಂತ ಮಾರ್ಗದರ್ಶನ ಮತ್ತು ಮಾಹಿತಿ, ಸರ್ಕಾರದಿಂದ ಲಭ್ಯವಿರುವ ಪ್ರೋತ್ಸಾಹ ಮತ್ತು ರಿಯಾಯಿತಿ, ಸ್ವಯಂ ಉದ್ಯೋಗ ಪ್ರಾರಂಭಿಸಲು ಇರುವ ಯೋಜನೆಗಳ ವಿವರಗಳನ್ನು ನೀಡಲಿದ್ದು, ಆಸಕ್ತಿಯುಳ್ಳ ನಿರುದ್ಯೋಗಿ ಯುವಕ, ಯುವತಿಯರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ: 08156-273302.

ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ:
ಬೆಂಗಳೂರಿನ ಐಸಿಐಸಿಐ ಎಕಾಡೆಮಿ ಫಾರ್ ಸ್ಕಿಲ್ಸ್, ಐಸಿಐಸಿಐ ಫೌಂಡೇಶನ್ ವತಿಯಿಂದ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಬ್ಯಾಂಕಿಂಗ್ ಮತ್ತು ಸಾಫ್ಟವೇರ್‌, ಕಚೇರಿ ನಿರ್ವಹಣೆ ಮತ್ತು ಸಗಟು ಮಾರಾಟ ಕೋರ್ಸ್‌ಗಳಿಗೆ ಉಚಿತ ತರಬೇತಿ ನೀಡಲಾಗುವುದು.

ಸ್ಫೋಕನ್ ಇಂಗ್ಲಿಷ್, ಕಂಪ್ಯೂಟರ್, ಮೂಲ ಜಿಎಸ್‌ಟಿ, ಟ್ಯಾಲಿ ಮತ್ತು ಖಾತೆಗಳು, ಬ್ಯಾಂಕಿಂಗ್, ಸಂವಹನ ಮತ್ತು ವ್ಯಕ್ತಿತ್ವ ಅಭಿವೃದ್ಧಿ ಕೌಶಲಗಳು, ಜೀವನ ಕೌಶಲಗಳು, ಸಂದರ್ಶನ ಕೌಶಲಗಳು, ಗ್ರಾಹಕ ಸೇವೆ, ಚಿಲ್ಲರೆ ಮಾರಾಟ, ಶಿಷ್ಟಾಚಾರ ಈ ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು. ಮೂರು ತಿಂಗಳ ಅವಧಿಯ ಈ ತರಬೇತಿ ಉಚಿತವಾಗಿರುತ್ತದೆ.

ತರಬೇತಿ ವೇಳೆ ಎರಡು ಜತೆ ಸಮವಸ್ತ್ರ, ಒಂದು ಹೊತ್ತಿನ ಊಟದ ವ್ಯವಸ್ಥೆ ಸಂಸ್ಥೆಯಿಂದಲೇ ನೀಡಲಾಗುತ್ತದೆ. ಕೋರ್ಸ್ ಮುಕ್ತಾಯಗೊಳ್ಳುವ ವೇಳೆಗೆ ತರಬೇತಿ ಪಡೆದ ಅಭ್ಯರ್ಥಿಗಳ ಕಾರ್ಯ ಕ್ಷಮತೆ ಮೇರೆಗೆ ಉದ್ಯೋಗಾವಕಾಶವನ್ನು ಸಹ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್‌ತದೆ. ತರಬೇತಿ ಅವಧಿಯಲ್ಲಿ ನಿಗಮದ ವತಿಯಿಂದ ಸ್ಥಳೀಯವಾಗಿ ತರಬೇತಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ ₹1,200 ಪ್ರಯಾಣ ವೆಚ್ಚ ಹಾಗೂ ಬೇರೆ ಜಿಲ್ಲೆಗಳಿಂದ ತರಬೇತಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ ₹5,000 ವಸತಿ ವೆಚ್ಚವನ್ನು ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಲಾಗುವುದು.

ಅರ್ಹತೆಗಳು: ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು ಹಾಗೂ ಕಳೆದ ಕನಿಷ್ಟ 15 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. 10ನೇ ತರಗತಿ ಪಾಸಾಗಿರುವ, ಪಿಯುಸಿ ಹಾಗೂ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಯುವಕ, ಯುವತಿಯರು 18 ವರ್ಷದಿಂದ 30 ವರ್ಷದ ಒಳಗೆ ವಯೋಮಿತಿ ಹೊಂದಿರುವವರು ಅರ್ಜಿಗಳನ್ನು ಸಲ್ಲಿಸಬೇಕು.

ಜಿಲ್ಲಾಡಳಿತ ಭವನ ಭವನದಲ್ಲಿರುವ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿ ಅರ್ಜಿಯೊಂದಿಗೆ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್, ಗುರುತಿನ ಚೀಟಿ, ವಿದ್ಯಾರ್ಹತೆ ಪ್ರಮಾಣ ಪತ್ರಗಳು (10ನೇ ತರಗತಿ ಅಂಕಪಟ್ಟಿ ಕಡ್ಡಾಯ) ಬ್ಯಾಂಕ್ ಉಳಿತಾಯ ಖಾತೆಯ ಪಾಸ್‌ಬುಕ್ ಜೆರಾಕ್ಸ್ ಪ್ರತಿಗಳು ಲಗತ್ತಿಸಿ ಫೆ.18ರ ಒಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ: 08156-277161.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.