ADVERTISEMENT

ಏಡ್ಸ್‌ ತಡೆಗೆ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 3:18 IST
Last Updated 1 ಡಿಸೆಂಬರ್ 2020, 3:18 IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಡಿ. 1ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜನರಲ್ಲಿ ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ವಿಶ್ವ ಏಡ್ಸ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಕಬಾಡೆ ತಿಳಿಸಿದರು.

ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‌ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಆಸ್ಪತ್ರೆ ಆವರಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ಕಾರ್ಯಕ್ರಮ ನಡೆಯಲಿದೆ. ಏಡ್ಸ್ ಮತ್ತು ಎಚ್‌ಐವಿ ಸೋಂಕು ನಿಯಂತ್ರಣದ ಬಗ್ಗೆ ಪ್ರಮಾಣ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏಡ್ಸ್, ಕ್ಷಯ, ಐಸಿಟಿಸಿ, ಎಆರ್‌ಟಿ, ಎಸ್‌ಟಿಡಿ, ಸ್ವಯಂ ಸೇವಾ ಸಂಘ ಸಂಸ್ಥೆ ಸೇವೆಗಳ ಮಾಹಿತಿ ಮಳಿಗೆಯ ಉದ್ಘಾಟನೆ ನಡೆಯಲಿದೆ ಎಂದರು.

ADVERTISEMENT

ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಸೌಲಭ್ಯವಿದೆ. ಜಿಲ್ಲಾ ಆಸ್ಪತ್ರೆ, ಚಿಕ್ಕಬಳ್ಳಾಪುರ ಎಸ್.ಟಿ.ಐ, ಆರ್.ಟಿ.ಐ ಸೋಂಕಿತರಿಗೆ ಉಚಿತ ಔಷಧಿ ಸೌಲಭ್ಯ, ಸೋಂಕಿತರಿಗೆ ಉಚಿತ ಎಆರ್‌ಟಿ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ನಡೆಸಲಾಗುವುದು. ಇದಲ್ಲದೇ ವಿವಿಧ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕ್ಷಯರೋಗ ಮತ್ತು ಏಡ್ಸ್ ನಿರ್ಮೂಲನಾ ಕಾರ್ಯಕ್ರಮಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.