ಚಿಂತಾಮಣಿ: ನಗರದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಹೆಜ್ಜೇನು ದಾಳಿ ನಡೆಸಿದ್ದರಿಂದ ಸುಮಾರು 20-25 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಸಾರ್ವಜನಿಕ ಆಸ್ಪತ್ರೆ ಮತ್ತು ಡೆಕ್ಕನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳವಾರ 9.30ರ ಸಮಯದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದರು. ಆವರಣದ ಮೆಕಾನಿಕಲ್ ವಿಭಾಗದ ಮುಂಭಾಗದ ಮರದಲ್ಲಿದ್ದ ಹೆಜ್ಜೇನು ದಾಳಿ ನಡೆಸಿವೆ. ಆವರಣದಲ್ಲಿ ಒಡಾಡುತ್ತಿದ್ದ ವಿದ್ಯಾರ್ಥಿಗಳನ್ನು ಕಚ್ಚಿವೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 20-25 ವಿದ್ಯಾರ್ಥಿಗಳು ಹೆಜ್ಜೇನು ದಾಳಿಗೆ ತುತ್ತಾಗಿದ್ದಾರೆ. ಇನ್ನೂ ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿ ಸಂದ್ಯಾ ತೀವ್ರ ಅಸ್ವಸ್ಥಳಾಗಿದ್ದು ಡೆಕ್ಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾಳೆ.
ವಿದ್ಯಾರ್ಥಿ ಪ್ರಣತಿ, ರಿಫತ್ ಖಾನಂ, ಯೋಗೇಶ್, ಮುಸ್ತಾಫ, ಹರ್ಷವರ್ಧನ್, ಧನುಷ್ ಕುಮಾರ್, ವಿವೇಕ್, ಮಹೇಶ್, ಎಂ.ಎನ್.ಭರತ್, ಲಲಿತಕುಮಾರ್, ಕೋದಂಡ ಮತ್ತಿತರರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಬಹುತೇಕರು ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಕಾಲೇಜಿನ ಉಪನ್ಯಾಸಕರು ಆಸ್ಪತ್ರೆಗೆ ಭೇಟಿ ನೀಡಿದರು.
ಕಾಲೇಜಿನ ಆವರಣದ ಮರದಲ್ಲಿದ್ದ ಹೆಜ್ಜೇನು ನೊಣಗಳ ದಾಳಿಗೆ ಖಚಿತ ಮಾಹಿತಿ ಇಲ್ಲ. ಬಿಸಿಲಿನ ತಾಪಕ್ಕೆ ಅಥವಾ ಕಾಗೆಗಳು ಹೆಜ್ಜೇನಿಗೆ ತಾಕಿರುವುದರಿಂದ ದಾಳಿ ನಡೆಸಿರಬಹುದು ಎಂದು ಉಪನ್ಯಾಸಕರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.