ADVERTISEMENT

ಬಿಇಒ ವಿರುದ್ಧ ಶಿಕ್ಷಕರ ಪ್ರತಿಭಟನೆ

ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂತೆ ನಿಂದಿಸುವ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಚೇರಿಗೆ ಅಲೆದಾಡಿಸುತ್ತಾರೆ – ಆರೋಪ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2018, 14:37 IST
Last Updated 6 ಅಕ್ಟೋಬರ್ 2018, 14:37 IST
ನಗರದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಶಿಕ್ಷಕರು ಪ್ರತಿಭಟನೆ ನಡೆಸಿದರು.
ನಗರದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಶಿಕ್ಷಕರು ಪ್ರತಿಭಟನೆ ನಡೆಸಿದರು.   

ಚಿಕ್ಕಬಳ್ಳಾಪುರ: ಶಿಕ್ಷಕರನ್ನು ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂತೆ ನಿಂದಿಸುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಶಿಕ್ಷಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.


ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ನಾರಾಯಣಸ್ವಾಮಿ ಮಾತನಾಡಿ, ‘ಶಾಲೆಗಳಿಗೆ ಸಂಬಂಧಿಸಿದ ಕೆಲಸಗಳಿಗಾಗಿ ಕಚೇರಿಗೆ ಹೋದರೆ ಬಿಇಒ ಅವರು ನಮ್ಮನ್ನು ನಾಯಿಗಳ ರೀತಿ ಪದೇ ಪದೇ ಅಲೆದಾಡಿಸುತ್ತಾರೆ. ಈವರೆಗೆ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಮನಸ್ಸು ಮಾಡಿಲ್ಲ. ಆದ್ದರಿಂದ ಬಿಇಒ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.


‘ಶಿಕ್ಷಕರು ಸಾಮಾನ್ಯ ಭವಿಷ್ಯ ನಿಧಿ ಮತ್ತು ಕರ್ನಾಟಕ ಸರ್ಕಾರ ವಿಮಾ ಇಲಾಖೆಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ಡಿಡಿಪಿಐ ಕಚೇರಿಯಲ್ಲಿ ಎರಡ್ಮೂರು ದಿನಗಳಲ್ಲಿ ಅದಕ್ಕೆ ಮಂಜೂರಾತಿ ದೊರೆಯುತ್ತದೆ. ಆದರೆ ಬಿಇಒ ಅವರು ಮಂಜೂರಾತಿಗೆ ತಿಂಗಳುಗಟ್ಟಲೇ ಅಲೆದಾಡಿಸುತ್ತಾರೆ. ವೈದ್ಯಕೀಯ ವೆಚ್ಚದ ಬಿಲ್‌ಗಳ ಪಾವತಿಸಲು ವಿಳಂಬ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT


ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಸ್.ರಾಮಶೇಷಪ್ಪ ಮಾತನಾಡಿ, ‘ಮೂರು ವರ್ಷಗಳಿಂದ ನಮ್ಮಲ್ಲಿ ಚುನಾವಣೆ ಕಾರ್ಯದಲ್ಲಿ ಮತಗಟ್ಟೆ ಅಧಿಕಾರಿಗಳಾಗಿ (ಬಿಎಲ್ಒ) ಕೆಲಸ ಮಾಡಿರುವವರಿಗೆ, ಬರಗಾಲದಲ್ಲಿ ಬಿಸಿಯೂಟ ಯೋಜನೆಯಲ್ಲಿ ತೊಡಗಿಸಿಕೊಂಡ ಶಿಕ್ಷಕರಿಗೆ ಇಲಾಖೆಯ ನಿಯಮಾನುಸಾರ ಗಳಿಕೆ ರಜೆ ಮಂಜೂರು ಮಾಡಬೇಕು. ಆದರೆ ಅದನ್ನು ಮಾಡಿಲ್ಲ. ಜತೆಗೆ ಅದನ್ನು ಕನಿಷ್ಠ ಸೇವಾ ಪುಸ್ತಕದಲ್ಲಿ ಬರೆಸುವ ಶಕ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಲ್ಲ. ಆ ಬಗ್ಗೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.


‘15 ವರ್ಷಗಳಿಂದ ಬಾಕಿ ಇರುವ ವಾರ್ಷಿಕ ವೇತನ ಬಡ್ತಿ ನೀಡಲು ಮತ್ತಷ್ಟು ವಿಳಂಬ ಮಾಡುತ್ತಿದ್ದಾರೆ. ಬಿಇಒ ಇವರ ನಿರ್ಲಕ್ಷ್ಯತನದಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇನ್ನಾದರೂ ಅವರು ತಮ್ಮ ವರ್ತನೆ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಶಾಲೆಗಳನ್ನು ಮುಚ್ಚಿ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.


ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಉಪಾಧ್ಯಕ್ಷ ಎಸ್.ಎಂ.ಕೃಷ್ಣ, ಸಹ ಕಾರ್ಯದರ್ಶಿ ಎಸ್.ವಿ.ರಾಮಕೃಷ್ಣ, ಜಯಭಾರತಿ, ಸಂಘಟನಾ ಕಾರ್ಯದರ್ಶಿ ಜಾಬಿವುಲ್ಲಾ, ಸದಸ್ಯರಾದ, ಎಂ ರಾಮಚಂದ್ರಪ್ಪ, ಸುಬ್ಬಾರೆಡ್ಡಿ. ಪ್ರಧಾನ ಕಾರ್ಯದರ್ಶಿ ನಾಗರಾಜಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.