ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲದ ಅಮ್ಮಾಜಾನ್ ಬಾವಾಜಾನ್ ದರ್ಗಾಕ್ಕೆ ಮಂಗಳಮುಖಿಯರು ಆರ್ಧ ಕೆ.ಜಿಯಷ್ಟು ಬೆಳ್ಳಿ ದೀಪದೊಂದಿಗಿನ ಹಸ್ತವನ್ನು ಸೋಮವಾರ ಕಾಣಿಕೆಯಾಗಿ ನೀಡಿದರು.
ದರ್ಗಾಕ್ಕೆ ಭೇಟಿ ನೀಡಿ ಅಮ್ಮಾಜಾನ್ ಬಾವಾಜಾನ್‌ಗೆ ವಿಶೇಷ ಪೂಜೆ ಸಲ್ಲಿಸಿದ ಮಂಗಳಮುಖಿಯರು, ಬೆಳ್ಳಿ ದೀಪದೊಂದಿಗಿನ ಹಸ್ತವನ್ನು ಕಾಣಿಕೆಯಾಗಿ ಜಿಲ್ಲಾ ವಕ್ಫ್ ಅಧಿಕಾರಿ ನವೀದ್ ಪಾಷಾ ಹಾಗೂ ಮುರುಗಮಲ್ಲ ದರ್ಗಾ ಮೇಲ್ವಿಚಾರಕ ತಯೂಬ್ ನವಾಜ್ ಮುಖಾಂತರ ಹಸ್ತಾಂತರ ಮಾಡಿದರು.
ಮಂಗಳಮುಖಿಯರ ನಾಯಕಿ ಸಲ್ಮಾನಾಯ್ಕ್ ಮಾತನಾಡಿ, ‘ನಾವು ಎಲ್ಲ ಜನರು ಸುಖ, ಶಾಂತಿ ಮತ್ತು ನೆಮ್ಮಂದಿಯಿಂದ ಬಾಳಬೇಕು ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ. ನಮಗೂ ಕೂಡ ವಸತಿ ಸೇರಿದಂತೆ ಹಲವಾರು ರೀತಿಯ ಸಮಸ್ಯೆಗಳಿದ್ದು, ನಮಗೆ ಯಾರೂ ಮನೆಗಳನ್ನು ಬಾಡಿಗೆಗೆ ಕೊಡಲು ಮುಂದೆ ಬರುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಹಿಂದಿನ ಶಾಸಕರು ಮಂಗಳಮುಖಿಯರಿಗೆ ನಿವೇಶನ ನೀಡುವುದಾಗಿ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ. ಸಚಿವ ಡಾ.ಎಂ.ಸಿ. ಸುಧಾಕರ್ ಮಂಗಳಮುಖಿಯರಿಗೆ ನಿವೇಶನ ನೀಡಿ ವಸತಿ ಸೌಲಭ್ಯ ಕಲ್ಪಿಸಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳು ಕೂಡ ನಮಗೆ ಸಮರ್ಪಕವಾಗಿ ಸಿಗುತ್ತಿಲ್ಲ. ಸರ್ಕಾರದ ಸೌಲಭ್ಯಗಳನ್ನು ಒದಗಿಸಿಕೊಡಬೇಕು’ ಎಂದು ಮನವಿ ಮಾಡಿದರು.
‘ಮಂಗಳಮುಖಿಯರು ಸಹ ವಿದ್ಯಾವಂತರಾಗುತ್ತಿದ್ದಾರೆ. ಕುಟುಂಬದವರು ಮಂಗಳಮುಖಿಯರನ್ನು ಮನೆಗೆ ಸೇರಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ಸಮಾಜ ಮತ್ತು ಸರ್ಕಾರ ನಮ್ಮ ನೆರವಿಗೆ ಬರಬೇಕು. ನಮ್ಮಲ್ಲಿಯೂ ಕೂಡ ವಿದ್ಯಾವಂತರಿದ್ದು, ಸರ್ಕಾರವು ಉದ್ಯೋಗ ನೀಡಬೇಕು’ ಎಂದರು.
ಮಂಗಳಮುಖಿಯರಾದ ಪ್ರಿಯಾ, ಸಂಗೀತ,ಬಿಂದು,ಪೂನಮ್,ಆಶ್ವಿನಿ, ಪುಷ್ಪ, ಗಂಗಾ, ಮುಸ್ಕಾನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.