ADVERTISEMENT

ಕೈವಾರ ಪ್ರಾಥಾಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ

ನಂದಿ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ । ದಶಕದ ಬೇಡಿಕೆಗೆ ಸ್ಪಂದನೆ

ಎಂ.ರಾಮಕೃಷ್ಣಪ್ಪ
Published 3 ಜುಲೈ 2025, 8:38 IST
Last Updated 3 ಜುಲೈ 2025, 8:38 IST
ಚಿಂತಾಮಣಿ ತಾಲ್ಲೂಕಿನ ಕೈವಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ
ಚಿಂತಾಮಣಿ ತಾಲ್ಲೂಕಿನ ಕೈವಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ   

ಚಿಂತಾಮಣಿ: ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಹಾಗೂ ಪ್ರವಾಸಿ ಕೇಂದ್ರ ಕೈವಾರದ ಸರ್ಕಾರಿ ಪ್ರಾಥಮಿಕ ಕೇಂದವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಬುಧವಾರ ನಂದಿಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸಮುದಾಯ ಆರೋಗ್ಯ ಕೇಂದ್ರ ಆಗುವ ಎಲ್ಲ ಅರ್ಹತೆಯನ್ನು ಕೈವಾರದ ಪ್ರಾಥಮಿಕ ಆರೋಗ್ಯ ಕೇಂದ್ರ ಹೊಂದಿದೆ ಎಂದು ದಶಕದ ಹಿಂದೆಯೇ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸಲ್ಲಿಸಲಾಗಿತು. ಆದರೆ 10-12 ವರ್ಷಗಳಿಂದಲೂ ಯಾವುದೇ ಸ್ಪಂದನೆ ದೊರೆತಿರಲಿಲ್ಲ.

ಧಾರ್ಮಿಕ, ಪ್ರವಾಸಿ ತಾಣ ಹಾಗೂ ಹೋಬಳಿ ಕೇಂದ್ರವಾಗಿರುವ ಕೈವಾರ ತಾಲ್ಲೂಕಿನಲ್ಲಿ ಅತ್ಯಂತ ದೊಡ್ಡ ಗ್ರಾಮ ಪಂಚಾಯಿತಿ ಆಗಿದೆ. ಹೆಚ್ಚಿನ ಜನಸಂಖ್ಯೆ, ವ್ಯಾಪಾರ ವಹಿವಾಟು ಇಲ್ಲಿ ನಡೆಯುತ್ತದೆ. ಕೈವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೈವಾರ, ಮಸ್ತೇನಹಳ್ಳಿ, ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿಗಳ 32 ಗ್ರಾಮಗಳಿವೆ. 2011 ಜನಗಣತಿ ಪ್ರಕಾರ 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇಷ್ಟೊಂದು ಗ್ರಾಮಗಳು ಮತ್ತು ಜನಸಂಖ್ಯೆಗೆ ಕೇವಲ ಒಬ್ಬ ವೈದ್ಯ, ಕಡಿಮೆ ವೈದ್ಯಕೀಯ ಮೂಲ ಸೌಲಭ್ಯ ಸಾಲದು ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ADVERTISEMENT

2012ರಲ್ಲಿ ಅಂದಿನ ಶಾಸಕ ಡಾ.ಎಂ.ಸಿ.ಸುಧಾಕರ್ ಕೈವಾರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ಪಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ನಂತರ 2013, 2018 ರ ಚುನಾವಣೆಯಲ್ಲಿ ಅವರು ಸೋತಿದ್ದರಿಂದ ಪ್ರಸ್ತಾವನೆ ನೆನಗುದಿಗೆ ಬಿದ್ದಿತ್ತು. ಈಗ ಅನುಮೋದನೆ ದೊರೆತಿದೆ.

ಏನೇನು ಸೌಲಭ್ಯ?

ಸಮುದಾಯ ಆರೋಗ್ಯ ಕೇಂದ್ರವಾದರೆ ಐದು ತಜ್ಞ ವೈದ್ಯರ ಹುದ್ದೆ ಸೃಷ್ಠಿಯಾಗುತ್ತವೆ. ಮಕ್ಕಳ ತಜ್ಞ ಸ್ತ್ರೀರೋಗ ತಜ್ಞ ಅರಿವಳಿಕೆ ತಜ್ಞರು. ಜತೆಗೆ ಒಬ್ಬ ಸೀನಿಯರ್ ಮೆಡಿಕಲ್ ಆಫೀಸರ್ ಒಬ್ಬ ದಂತ ವೈದ್ಯರು ಇರುತ್ತಾರೆ. ನರ್ಸ್ ಮತ್ತು ಸಿಬ್ಬಂದಿಯ ಸಂಖ್ಯೆಯು ಹೆಚ್ಚಾಗುತ್ತದೆ. ದಿನದ 24 ಗಂಟೆಯೂ ಆರೋಗ್ಯ ಸೇವೆ ಸಿಗುತ್ತದೆ. ವೈದ್ಯರು ಪಾಳಿ ಪದ್ಧತಿಯಲ್ಲಿ ಕಾರ್ಯನಿರ್ವಹಿಸಿ ರಾತ್ರಿ ವೇಳೆಯಲ್ಲೂ ವೈದ್ಯರ ಸೇವೆ ದೊರೆಯುತ್ತದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.