ADVERTISEMENT

ಚಿಂತಾಮಣಿ: ಸತ್ಯಾಗ್ರಹ ಆರಂಭಿಸಿದ ನಿವೃತ್ತ ಯೋಧ

ಚಿಂತಾಮಣಿ: ಭೂಮಿ ಮಂಜೂರಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 6:06 IST
Last Updated 25 ಮಾರ್ಚ್ 2023, 6:06 IST
ಚಿಂತಾಮಣಿಯ ತಾಲ್ಲೂಕು ಕಚೇರಿ ಮುಂದೆ ಭೂಮಿ ಮಂಜೂರಾತಿಗಾಗಿ ಒತ್ತಾಯಿಸಿ ನಿವೃತ್ತ ಸೈನಿಕ ಶಿವಾನಂದರೆಡ್ಡಿ ಧರಣಿ ಆರಂಭಿಸಿದರು
ಚಿಂತಾಮಣಿಯ ತಾಲ್ಲೂಕು ಕಚೇರಿ ಮುಂದೆ ಭೂಮಿ ಮಂಜೂರಾತಿಗಾಗಿ ಒತ್ತಾಯಿಸಿ ನಿವೃತ್ತ ಸೈನಿಕ ಶಿವಾನಂದರೆಡ್ಡಿ ಧರಣಿ ಆರಂಭಿಸಿದರು   

ಚಿಂತಾಮಣಿ: ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ರಾಯಪ್ಪಲ್ಲಿಯಲ್ಲಿ ಜಮೀನು ಮಂಜೂರು ಮಾಡಬೇಕೆಂದು ಒತ್ತಾಯಿಸಿ ನಿವೃತ್ತ ಸೈನಿಕ ಶಿವಾನಂದರೆಡ್ಡಿ ನಗರದ ತಾಲ್ಲೂಕು ಕಚೇರಿ ಮುಂದೆ ಶುಕ್ರವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

‘ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಅವಘಡದಿಂದ ಅಂಗವಿಕಲನಾದೆ. ಇದರಿಂದ 2004ರಲ್ಲಿ ಸೈನ್ಯದಿಂದ ಕಡ್ಡಾಯ ನಿವೃತ್ತಿ ನೀಡಲಾಯಿತು. ನಿವೃತ್ತ ಸೈನಿಕರಿಗೆ ಸರ್ಕಾರದಿಂದ ನ್ಯಾಯಯುತವಾಗಿ ದೊರೆಯಬೇಕಾದ ಭೂಮಿ ಮಂಜೂರು ಮಾಡುವಂತೆ ಸೈನ್ಯಾಧಿಕಾರಿ ಪತ್ರ ಬರೆದಿದ್ದೆ. ಅಂದಿನಿಂದ ಇಲ್ಲಿಯವರೆಗೆ 20 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಯಾವ ಸ್ಪಂದೆನೆಯೂ ದೊರೆತಿಲ್ಲ’ ಎಂದು ಶಿವಾನಂದರೆಡ್ಡಿ ಅವಲತ್ತುಕೊಂಡರು.

‘ಭೂಮಿ ಮಂಜೂರು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಶಾಸಕರಿಗೆ, ಸಚಿವರು ಮತ್ತು ಮುಖ್ಯಮಂತ್ರಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಅನೇಕ ಬಾರಿ ಪ್ರತಿಭಟನೆ, ಸತ್ಯಾಗ್ರಹ ನಡೆಸಿದ್ದೇನೆ. ಇಲ್ಲಿಂದ ಬೆಂಗಳೂರು ವರೆಗೆ ಕಾಲ್ನಡಿಗೆ ಜಾಥಾ ನಡೆಸಿದರೂ ಯಾರು ಮನಸ್ಸಿ ಕರಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮಾರ್ಚ್‌ 6 ರಂದು ಉಪವಾಸ ಸತ್ಯಾಗ್ರಹ ನಡೆಸಿದ್ದೆ, ನಾಲ್ಕು ದಿನಗಳ ಕಾಲ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದ್ದೆ, ಶಾಸಕ ಎಂ.ಕೃಷ್ಣಾರೆಡ್ಡಿ, ಅಂದಿನ ತಹಶೀಲ್ದಾರ್ ರಾಜೇಂದ್ರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಒಂದು ವಾರದೊಳಗೆ ಒಳಗೆ ಜಮೀನು ಗುರುತಿಸಿ ಮಂಜೂರಾತಿಗೆ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗೆ ರವಾನಿಸಲಾಗುವುದು ಎಂದು ಭರವಸೆ ನೀಡಿ, ಸತ್ಯಾಗ್ರಹವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ವಾರದೊಳಗೆ ಪ್ರಸ್ತಾವನೆ ಸಲ್ಲಿಸದಿದ್ದರೆ ಶಾಸಕರು ನನ್ನ ಜತೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಆಶ್ವಾಸನೆ ನೀಡಿದ್ದರು. ಶಾಸಕರ ಮಾತಿಗೆ ಗೌರವ ನೀಡಿ, ಷರತ್ತಿನೊಂದಿಗೆ ಪ್ರತಿಭಟನೆ ಹಿಂತೆಗೆದುಕೊಂಡಿದ್ದೆ’ ಎಂದು ತಿಳಿಸಿದರು.

‘ಮೂರು ವಾರ ಕಳೆದಿದರೂ ತಾಲ್ಲೂಕು ಆಡಳಿತ ಭರವಸೆ ಈಡೇರಿಸಿಲ್ಲ.ಇದನ್ನು ಖಂಡಿಸಿ ತಾಲ್ಲೂಕು ಕಚೇರಿ ಮುಂದೆ ಶುಕ್ರವಾರದಿಂದ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇನೆ’ ಎಂದು ತಿಳಿಸಿದರು. ಕನ್ನಡಪರ ಸಂಘಟನೆಗಳು, ಮಹಿಳಾ ಸಂಘನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಸತ್ಯಾಗ್ರಹಕ್ಕೆ ಬೆಂಬಲ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.