ADVERTISEMENT

ಸಿಪಿಎಂ ರಾಜ್ಯ ಸಮ್ಮೇಳನ: ಪೋಸ್ಟರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 13:08 IST
Last Updated 27 ಡಿಸೆಂಬರ್ 2024, 13:08 IST
ಸಿಪಿಎಂ ರಾಜ್ಯ ಸಮ್ಮೇಳನದ ಪೋಸ್ಟರ್‌ಗಳನ್ನು ಬಾಗೇಪಲ್ಲಿಯಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಬಿಡುಗಡೆ ಮಾಡಿದರು
ಸಿಪಿಎಂ ರಾಜ್ಯ ಸಮ್ಮೇಳನದ ಪೋಸ್ಟರ್‌ಗಳನ್ನು ಬಾಗೇಪಲ್ಲಿಯಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಬಿಡುಗಡೆ ಮಾಡಿದರು   

ಬಾಗೇಪಲ್ಲಿ: ತುಮಕೂರಿನಲ್ಲಿ ಡಿಸೆಂಬರ್ 29, 30, 31 ರಂದು ನಡೆಯಲಿರುವ ಸಿಪಿಎಂನ 24ನೇ ರಾಜ್ಯ ಸಮ್ಮೇಳನದ ರ‍್ಯಾಲಿ, ಬಹಿರಂಗ ಸಭೆಯ ಪೋಸ್ಟರ್‌ನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಹಾಗೂ ಪದಾಧಿಕಾರಿಗಳು ಸಿಪಿಎಂ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು.

ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ‘ಸ್ಥಳೀಯ ಶಾಖೆಗಳ, ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದ ಸಿಪಿಎಂ ಸಮ್ಮೇಳನ ಮಾಡಲಾಗಿದೆ. ಆಯಾಯ ಸ್ಥಳೀಯ ಸಮಸ್ಯೆಗಳ ಬಗ್ಗೆ ಸಮ್ಮೇಳನಗಳಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ರಾಜ್ಯ ಸಮ್ಮೇಳನ ತುಮಕೂರಿನಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ರಾಜ್ಯ ರಾಜಕೀಯ ಪರಿಸ್ಥಿತಿಯ ಅವಲೋಕನದ ಚರ್ಚೆ ನಡೆಯಲಿದೆ. ಮುಂದಿನ 3 ವರ್ಷ ಸಿಪಿಎಂ ಪಕ್ಷವನ್ನು ಸಂಘಟಿಸಲು, ಪರ್ಯಾಯ ಶಕ್ತಿಯಾಗಿ ರೂಪುಗೊಳಿಸಲು ಚರ್ಚಿಸಲಾಗುವುದು’ ಎಂದರು.

‘ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೃಷಿಕೂಲಿಕಾರ್ಮಿಕರ, ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿವೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ಬಿಜೆಪಿ ಪಾಲಾಗಿದೆ. ಕಾಂಗ್ರೆಸ್, ಬಿಜೆಪಿಯವರು ಕಾರ್ಪೋರೇಟ್ ಕಂಪನಿಗಳಿಗೆ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದರ ವಿರುದ್ಧವಾಗಿ ಸಿಪಿಎಂ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೋರಾಟ ಮಾಡಲಿದೆ. ಪಕ್ಷದ ಸಂಘಟನೆಗೆ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರ ಹೋರಾಟ ರೂಪಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಶಾಶ್ವತ ನೀರಾವರಿಗಾಗಿ ಕೃಷ್ಣ ನದಿಯ ಪಾಲು ಕೇಳಲು ಜನಾಂದೋಲನ ರೂಪಿಸಲಾಗುವುದು. ಜಿಲ್ಲೆಯಿಂದ 20 ಮುಖಂಡರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಸಿಪಿಎಂ ರಾಜ್ಯ ಸಮಿತಿ ಸದಸ್ಯ ಬಿಳ್ಳೂರುನಾಗರಾಜ್, ಎಂ.ಎನ್.ರಘುರಾಮರೆಡ್ಡಿ, ಜಿಲ್ಲಾ ಸಮಿತಿ ಸದಸ್ಯ ಅಶ್ವತ್ಥಪ್ಪ, ತಾಲ್ಲೂಕು ಸಮಿತಿ ಸದಸ್ಯ ಡಿ.ಟಿ.ಮುನಿಸ್ವಾಮಿ, ಒಬಳರಾಜು, ಚಂಚುರಾಯನಪಲ್ಲಿ ಜಿ.ಕೃಷ್ಣಪ್ಪ, ಆಗಟಮಡಕ ಜಿ.ಕೃಷ್ಣಪ್ಪ, ಎ.ಸೋಮಶೇಖರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.