ಬಾಗೇಪಲ್ಲಿ: ಪಟ್ಟಣದ ಸುಂದರಯ್ಯ ಭವನದಲ್ಲಿ ಶನಿವಾರ ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಕೇಂದ್ರ ಸಮಿತಿಯಿಂದ ಹಮ್ಮಿಕೊಂಡ ‘24ನೇ ಮಹಾಧೀಶನದ ಕರಡು ರಾಜಕೀಯ ವಿಮರ್ಶಾ ವರದಿ ನಿರ್ಣಯ’ದ ಕನ್ನಡ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.
ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ‘ತಮಿಳುನಾಡಿನ ಮದುರೈನಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಅಖಿಲ ಭಾರತದ 24ನೇ ಮಹಾ ಅಧಿವೇಶನವು ಏಪ್ರಿಲ್ 2ರಿಂದ 6ರವರೆಗೆ ನಡೆಯಲಿದೆ. ಸಿಪಿಎಂನಲ್ಲಿ ಮಾತ್ರವೇ ಶಾಖಾ ಸಮ್ಮೇಳನದಿಂದ ಅಖಿಲ ಭಾರತ ಮಟ್ಟದ ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ. ಸಮ್ಮೇಳನಗಳಲ್ಲಿ ಪಕ್ಷ ಸಂಘಟನೆ, ಕೃಷಿ ಕೂಲಿಕಾರ್ಮಿಕರು, ಜನಸಾಮಾನ್ಯರ ವರ್ಗಗಳ ಸಮಸ್ಯೆಗಳ ವಿರುದ್ಧ ಜನಾಂದೋಲನದ ರೂಪುರೇಷೆಗಲನ್ನು ಚರ್ಚಿಸಲಾಗುತ್ತದೆ. ಇದು ಸಿಪಿಎಂ ಪಕ್ಷದ ತತ್ವ, ಸಿದ್ಧಾಂತವಾಗಿದೆ’ ಎಂದು ಹೇಳಿದರು.
ಬಿಜೆಪಿ, ಕಾಂಗ್ರೆಸ್, ಪ್ರಾದೇಶಿಕ ಪಕ್ಷಗಳಿಗೆ ತತ್ವ, ಸಿದ್ಧಾಂತ ಇಲ್ಲ. ಕೇವಲ ಹಣ, ಅಧಿಕಾರವೇ ಅವುಗಳ ಧ್ಯೇಯವಾಗಿದೆ. ಆದರೆ, ಸಿಪಿಎಂ ಪಕ್ಷವು ಎಂದಿಗೂ ಅಧಿಕಾರದ ಹಿಂದೆ ಬಿದ್ದಿಲ್ಲ. ಜನರು ಸಿಪಿಎಂ ಪಕ್ಷಕ್ಕೆ ಅಧಿಕಾರ ನೀಡಿದರೆ, ಜನ ಕಲ್ಯಾಣ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು. ಜನರು ಕಳಿಸುವ ವಿಷಯಗಳನ್ನು ಕ್ರೋಢೀಕರಿಸಿ, ಕೇಂದ್ರ ಸಮಿತಿಯು ಮಹಾಧಿವೇಶನದಲ್ಲಿ ಚರ್ಚೆ ಮಾಡಲಿದೆ ಎಂದರು.
ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿದರು.
ಸಭೆಯಲ್ಲಿ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಲಿ ಸದಸ್ಯರಾದ ಬಿಳ್ಳೂರುನಾಗರಾಜ್, ಎಂ.ಎನ್.ರಘುರಾಮರೆಡ್ಡಿ, ಜಯರಾಮರೆಡ್ಡಿ, ಬಿ.ಎನ್.ಮುನಿಕೃಷ್ಣಪ್ಪ, ಬೈರೆಡ್ಡಿ, ಜಿ.ಮುಸ್ತಾಫ, ಅಶ್ವಥ್ಥಪ್ಪ, ಜಿ.ಕೃಷ್ಣಪ್ಪ, ಡಿ.ಟಿ.ಮುನಿಸ್ವಾಮಿ, ಚನ್ನರಾಯಪ್ಪ, ಎ.ಸೋಮಶೇಖರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.