ADVERTISEMENT

ಶಿಡ್ಲಘಟ್ಟ: ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಿ

ಪೊಲೀಸರಿಗೆ ಸಂಸದ ಮುನಿಸ್ವಾಮಿ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 4:11 IST
Last Updated 4 ಅಕ್ಟೋಬರ್ 2021, 4:11 IST
ಶಿಡ್ಲಘಟ್ಟ ತಾಲ್ಲೂಕಿನ ಬ್ಯಾಟರಾಯಸ್ವಾಮಿ ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯನ್ನು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ತಾಲ್ಲೂಕು ಬಿಜೆಪಿ ಘಟಕದಿಂದ ಸೇವಾ ಸಪ್ತಾಹದಡಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದ ಎಸ್. ಮುನಿಸ್ವಾಮಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಸ್ವಚ್ಛಗೊಳಿಸಿದರು
ಶಿಡ್ಲಘಟ್ಟ ತಾಲ್ಲೂಕಿನ ಬ್ಯಾಟರಾಯಸ್ವಾಮಿ ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯನ್ನು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ತಾಲ್ಲೂಕು ಬಿಜೆಪಿ ಘಟಕದಿಂದ ಸೇವಾ ಸಪ್ತಾಹದಡಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದ ಎಸ್. ಮುನಿಸ್ವಾಮಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಸ್ವಚ್ಛಗೊಳಿಸಿದರು   

ಶಿಡ್ಲಘಟ್ಟ: ‘ಗ್ರಾಮೀಣ ಪ್ರದೇಶದ ಅಂಗಡಿಗಳಲ್ಲಿ ಮದ್ಯ ಮಾರುವವರು ಎಷ್ಟೇ ಪ್ರಭಾವಿಗಳಾದರೂ ನಿರ್ದಾಕ್ಷಿಣ್ಯವಾಗಿ ಹಿಡಿದು ಸೂಕ್ತ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಬೇಕು’ ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ತಾಲ್ಲೂಕು ಬಿಜೆಪಿ ಘಟಕದಿಂದ ಸೇವಾ ಸಪ್ತಾಹದಡಿ ಸಂಸದರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚುನಾವಣೆ ವೇಳೆ ಮತ ಕೇಳಲು ಬರುವ ನಾಯಕರು ಬರೀ ಮತ ಕೇಳಿ ಹೋಗದೇ ಕುಡಿಯಲು ಒಂದಷ್ಟು ಮದ್ಯ ಕೊಟ್ಟು ಹೋಗುವ ಪರಿಣಾಮ ಯುವಕರನ್ನು ಕುಡುಕರನ್ನಾಗಿ ಮಾಡುತ್ತಾರೆ. ಇದರಿಂದ ಹೆತ್ತ ತಂದೆ, ತಾಯಿಗೆ ಊಟ ಹಾಕುವ ಬದಲಿಗೆ ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ಮನೆಯಲ್ಲಿರುವ ಹೆಣ್ಣುಮಕ್ಕಳ ಒಡವೆ ಮತ್ತು ಸೊಸೈಟಿಯಿಂದ ತಂದ ಅಕ್ಕಿಯನ್ನು ಸಹ ಸಾರಾಯಿ ಅಂಗಡಿಗೆ ನೀಡಿ ಕುಡಿಯುತ್ತಾರೆ. ಇದರಿಂದ ಮನೆಯಲ್ಲಿರುವ ಎಲ್ಲರೂ ಉಪವಾಸ ಇರಬೇಕಾಗಿದೆ. ಹಾಗಾಗಿ, ಹಳ್ಳಿಗಳಲ್ಲಿರುವ ಅಂಗಡಿಗಳಲ್ಲಿ ಮದ್ಯ ಮಾರುವವರು ಯಾರ ಹೆಸರೇ ಹೇಳಲಿ ಬಿಡದೇ ಹಿಡಿದು ಜೈಲಿಗಟ್ಟಬೇಕು ಎಂದು ಸೂಚಿಸಿದರು.

ಗ್ರಾಮೀಣ ಪ್ರದೇಶ ಅಭಿವೃದ್ಧಿಯಾದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಹಳ್ಳಿಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮದ ಯುವಕರು ಒಗ್ಗಟ್ಟಾಗಿ ವಾರಕ್ಕೊಮ್ಮೆ ಹಳ್ಳಿಯಲ್ಲಿ ಓಡಾಡಿ ಎಲ್ಲೆಂದರಲ್ಲಿ ಕಸ ಹಾಕುವುದರ ಬಗ್ಗೆ ತಿಳಿ ಹೇಳಬೇಕು. ಮನೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಈ ಹಿಂದೆ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಕಡಿಮೆ ಬರುತ್ತಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಗ್ರಾಮ ಪಂಚಾಯಿತಿಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಹರಿದು ಬರುತ್ತಿದೆ. ಸರ್ಕಾರದಿಂದ ಬರುವ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಜೊತೆಗೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಹಾಗೂ ನೀರು ಪೂರೈಸಲು ಆದ್ಯತೆ ನೀಡಬೇಕು ಎಂದು ಹೇಳಿದರು.

ಸೇವಾ ಸಪ್ತಾಹದ ಅಂಗವಾಗಿ ಬೈಕ್ ರ‍್ಯಾಲಿ ಮೂಲಕ ತೆರಳಿದ ಸಂಸದರು ಮೊದಲಿಗೆ ತಾಲ್ಲೂಕಿನ ಚಿಕ್ಕದಾಸರಹಳ್ಳಿಗೆ ಭೇಟಿ ನೀಡಿ ರಸ್ತೆಬದಿಯಲ್ಲಿದ್ದ ಕಸ ಕಂಡಕೂಡಲೇ ಸ್ವಚ್ಛಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆಸೂಚಿಸಿದರು.

ನಂತರ ಬ್ಯಾಟರಾಯಸ್ವಾಮಿ ದೇವಾಲಯದ ಬಳಿಗೆ ತೆರಳಿ ಅಲ್ಲಿನ ಕಲ್ಯಾಣಿ ಸ್ವಚ್ಛಗೊಳಿಸುವ ಕೆಲಸಕ್ಕೆ ಚಾಲನೆ ನೀಡಿದರು. ನಂತರ ತಾಲ್ಲೂಕಿನ ಚೀಮಂಗಲ ಗ್ರಾಮಕ್ಕೆ ತೆರಳಿ ಜನರನ್ನು ಉದ್ದೇಶಿಸಿ ಮಾತನಾಡಿದರು.

ಮಾಜಿ ಶಾಸಕ ಎಂ. ರಾಜಣ್ಣ, ನಗರ ಮಂಡಲ ಅಧ್ಯಕ್ಷ ಎಸ್. ರಾಘವೇಂದ್ರ, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಮುಖಂಡರಾದ ರಮೇಶ್‌ಬಾಯಿರಿ, ದಾಮೋದರ್, ಮಂಜುಳಮ್ಮ, ದೇವರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.