ADVERTISEMENT

ಮಳೆ ನೀರು ಸಂರಕ್ಷಿಸದಿದ್ದರೆ ಗಂಡಾಂತರ

‘ಚಿಲುಮೆ’ ಯೋಜನೆ ಅನುಷ್ಠಾನ ಪೂರ್ವಭಾವಿಯಾಗಿ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 15:17 IST
Last Updated 23 ಆಗಸ್ಟ್ 2019, 15:17 IST
ಕಾರ್ಯಾಗಾರದಲ್ಲಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಜಲತಜ್ಞ ಪ್ರೊ.ಎ.ಆರ್.ಶಿವಕುಮಾರ್ ಮಾತನಾಡಿದರು.
ಕಾರ್ಯಾಗಾರದಲ್ಲಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಜಲತಜ್ಞ ಪ್ರೊ.ಎ.ಆರ್.ಶಿವಕುಮಾರ್ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ನೀರಿನ ಸದ್ಬಳಕೆ ಸರಿಯಾಗಿ ಆಗದಿದ್ದರೆ ಮುಂದಿನ ಪೀಳಿಗೆಗೆ ನೀರಿನ ಅಭಾವ ಹೆಚ್ಚಾಗುತ್ತದೆ. ಇದನ್ನರಿತು ಎಲ್ಲರೂ ನೀರನ್ನು ಸಂರಕ್ಷಿಸಬೇಕು’ ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಜಲತಜ್ಞ ಪ್ರೊ.ಎ.ಆರ್.ಶಿವಕುಮಾರ್ ಹೇಳಿದರು.


ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ‘ಚಿಲುಮೆ’ ಯೋಜನೆ ಅನುಷ್ಠಾನಗೊಳಿಸುವ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಾಗೂ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.


‘ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದು ನೀರಿನ ಅಭಾವ ಹೆಚ್ಚಾಗುತ್ತಿದೆ. ಸಾವಿರಾರು ಅಡಿ ಕೊಳವೆಬಾವಿಗಳನ್ನು ತೆಗೆಸಿದರೂ ಹನಿ ನೀರು ಸಿಗುತ್ತಿಲ್ಲ. ಇರುವ ನೀರನ್ನು ಮಿತವಾಗಿ ಬಳಸಬೇಕು ಇಲ್ಲದಿದ್ದರೆ ಮನುಕುಲ ವಿನಾಶ ಕಟ್ಟಿಟ್ಟ ಬುತ್ತಿ. ಮಳೆ ನೀರು ಸಂಗ್ರಹಿಸುವುದಕ್ಕೆ ತುಂಬಾ ಹಣ ಖರ್ಚು ಮಾಡಬೇಕಿಲ್ಲ. ಇಚ್ಛಾಶಕ್ತಿ ಇದ್ದರೆ ಸಾಕು ಪ್ರತಿಯೊಬ್ಬರೂ ತಮ್ಮ ಅಗತ್ಯಕ್ಕೆ ಬೇಕಾದ ನೀರನ್ನು ಮಳೆಯಿಂದ ಸಂಗ್ರಹಿಸಬಹುದು’ ಎಂದು ತಿಳಿಸಿದರು.

ADVERTISEMENT


‘ಸುಮಾರು 24 ವರ್ಷಗಳಿಂದ ನಮ್ಮ ಕುಟುಂಬ ಮಳೆ ನೀರನ್ನೇ ಸಂಗ್ರಹಿಸಿ ಉಪಯೋಗಿಸುತ್ತಿದ್ದೇವೆ. ಮನೆ ನಿರ್ಮಾಣ ಹಂತದಲ್ಲಿಯೇ ಸುಮಾರು ₨15 ಸಾವಿರದಷ್ಟು ಖರ್ಚು ಮಾಡಿದರೆ ಮಳೆ ನೀರು ಸಂಗ್ರಹ ವ್ಯವಸ್ಥೆ ಅಚ್ಚುಕಟ್ಟಾಗಿ ಅಳವಡಿಸಿಕೊಳ್ಳಬಹುದು. ನೀರಿನ ಹಾಹಾಕಾರ ಅರಿತು ಈಗಾಗಲೇ ಬೆಂಗಳೂರಿನಲ್ಲಿ 1.25 ಲಕ್ಷ ಕುಟುಂಬಗಳು ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಂಡಿವೆ’ಎಂದರು.


ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮಾತನಾಡಿ, ‘ಸಂಪನ್ಮೂಲಗಳ ಬಗ್ಗೆ ಸಾರ್ವಜನಿಕರಲ್ಲಿ ಕಾಳಜಿ ಇಲ್ಲದೆ ಅನೇಕ ಕೆರೆ, ಕುಂಟೆಗಳು ಒತ್ತುವರಿಯಾಗುತ್ತಿವೆ. ಅತಿಯಾದ ಕೊಳವೆ ಬಾವಿಗಳಿಂದ ಅಂತರ್ಜಲ ಮಟ್ಟ ಕೂಡ ಕುಸಿದು ಹೋಗಿದೆ. ಸತತ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ಜನರು ಇವತ್ತು ಮಳೆ ನೀರು ಸಂಗ್ರಹಿಸುವ ಅಗತ್ಯವಿದೆ’ ಎಂದು ಹೇಳಿದರು.


‘ಈಗಾಗಲೇ ನಗರಕ್ಕೆ ನೀರು ಪೂರೈಸುವ ಜಕ್ಕಲಮಡುಗು ಜಲಾಶಯ ಕೂಡ ಬತ್ತಿ ಹೋಗಿದೆ. ಆದ್ದರಿಂದ ನಗರದಲ್ಲಿ ಕುಡಿಯವ ನೀರಿನ ಅಬಾವ ಉಂಟಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ಪೀಳಿಗೆಗೆ ಕುಡಿಯಲು ಸಹ ನೀರು ಸಿಗುವುದಿಲ್ಲ. ನಾವು ಈಗಿನಿಂದಲೇ ಎಚ್ಚೆತ್ತುಕೊಂಡು ಮಳೆ ನೀರು ಸಂಗ್ರಹಿಸುವ ಕೆಲಸಕ್ಕೆ ಮುಂದಾಗಬೇಕಿದೆ’ ಎಂದು ತಿಳಿಸಿದರು.


‘ಜಿಲ್ಲೆಯಲ್ಲಿ ಈ ಹಿಂದೆ ಕಲ್ಯಾಣಿಗಳು ಕಸದ ತೊಟ್ಟಿಗಳಾಗಿದ್ದವು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಈವರೆಗೆ ಜಿಲ್ಲಾಡಳಿತ 92 ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ ಪುನರುಜ್ಜೀವನಗೊಳಿಸಿದೆ. ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳು ಒತ್ತುವರಿಯಾಗಿವೆ. ಜನರು ಕೆರೆಗಳಲ್ಲಿ ಕಲ್ಲು, ಮಣ್ಣು ತುಂಬಿ ಹೋಗುತ್ತಿದ್ದಾರೆ. ಮಳೆಯಾದರೂ ಕೆರೆಗಳಲ್ಲಿ ನೀರು ಸಂಗ್ರಹವಾದಂತಹ ಸ್ಥಿತಿ ಇದೆ’ ಎಂದರು.


‘ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಸ್ವಯಂಸೇವಕರು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಮನೆ ಮನೆಗೂ ಭೇಟಿ ನೀಡಿ ಮಳೆ ನೀರು ಸಂಗ್ರಹಿಸುವುದರ ಮಹತ್ವದ ಕುರಿತು ಮನವರಿಕೆ ಮಾಡಿಕೊಡಬೇಕು. ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳುವ ಮನೆಯ ಮಾಲೀಕರಿಗೆ ಜಿಲ್ಲಾಡಳಿತದಿಂದ ₨5,000 ಪ್ರೋತ್ಸಾಹ ಧನ ನೀಡಲಾಗುತ್ತದೆ’ ಎಂದು ಹೇಳಿದರು.


ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.